ಬಳ್ಳಾರಿ,ಎಐಯುಟಿಯುಸಿಗೆ ಸಂಯೋಜನೆಗೊಂಡ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕ ಸಂಘದಿಂದ ಬಳ್ಳಾರಿಯ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ರಾಜ್ಯವ್ಯಾಪಿ ಹೋರಾಟದ ಭಾಗವಾಗಿ ಪ್ರತಿಭಟನೆಯನ್ನ ಹಮ್ಮಿಕೊಳ್ಳಲಾಗಿತ್ತು.
ಬರುವ ರಾಜ್ಯ ಬಜೆಟ್‌ನಲ್ಲಿ ಗೌರವ ಧನ ಹೆಚ್ಚಳ ಸೇರಿದಂತೆ ಇನ್ನಿತರ ಬೇಡಿಕೆಗಳಿಗಾಗಿ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಇದರ ಜೊತೆಗೆ ಗಣಿ ಬಾಧಿತ ತಾಲ್ಲೂಕುಗಳಲ್ಲಿ ಜಾರಿಯಾಗಿರುವ ಪೂರಕ ಪೌಷ್ಠಿಕ ಆಹಾರ ಯೋಜನೆಯ ೩ ತಿಂಗಳಿನಿಂದ ಬಿಡುಗಡೆಯಾಗದ ಗೌರವ ಸಂಭಾವನೆ ಕೂಡಲೆ ಬಿಡುಗಡೆಗೊಳಿಸಬೇಕೆಂದು, ಬಾಕಿಯಿರುವ ಮೊಟ್ಟೆ ಸುಲಿದ ಹಣವನ್ನು ನೀಡುವಂತೆ ಒತ್ತಾಯಿಸಲಾಯಿತು.
ಮುಖ್ಯಮಂತ್ರಿಗಳಿಗೆ ಉದ್ದೇಶಿಸಲಾದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನೀಡಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಡಾ.ಪ್ರಮೋದ್ ಎನ್ ಬಿಸಿಯೂಟ ಯೋಜನೆ ಕೆಳಗಡೆ ಕೆಲಸ ಮಾಡುವ ಅಡುಗೆ ಕಾರ್ಮಿಕರ ಗೌರವಧನ ಅತ್ಯಂತ ಕಡಿಮೆಯಾಗಿದೆ. ಮಾಸಿಕ ೪೬೦೦-೪೭೦೦ ರೂ ಪಡೆದು ಜೀವನ ನಡೆಸುವುದೇ ದುಸ್ತರವಾಗಿದೆ. ಇದೀಗ ಕೆಪಿಎಸ್ ಮ್ಯಾಗ್ನೆಟ್ ಶಾಲಾ ಯೋಜನೆಯ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಹಂತ ಹಂತವಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಪ್ರಕ್ರಿಯೆಯು ನಡೆಯುತ್ತಿದೆ ಎನ್ನುವುದರಿಂದ ಬಿಸಿಯೂಟ ಕಾರ್ಮಿಕರು ಕೆಲಸದ ಅಭದ್ರತೆಯಲ್ಲಿದ್ದು ತಮ್ಮ ಭವಿಷ್ಯದ ಕುರಿತು ಆತಂಕಿತರಾಗಿದ್ದಾರೆ.
ಈ ಎಲ್ಲಾ ಆತಂಕಗಳನ್ನು ಪರಿಹರಿಸಿ ಅವರಿಗೆ ಕೆಲಸದ ಭದ್ರತೆಯನ್ನು ನೀಡಬೇಕು ಹಾಗೂ ಈ ಬಾರಿಯ ಬಜೆಟ್‌ನಲ್ಲಿ ಅವರ ಗೌರವಧನವನ್ನು ಹೆಚ್ಚಿಸಬೇಕು. ಬಿಸಿ ಊಟ ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಪರಿಗಣಿಸಿ, ಕನಿಷ್ಠ ವೇತನ , ಪಿಎಫ್. ಇಎಸ್‌ಐ ಮುಂತಾದ ಶಾಸನಬದ್ಧ ಸೌಲಭ್ಯಗಳನ್ನು ನೀಡಬೇಕು”ಎಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕ ಸಂಘದ ಸಲಹೆಗಾರರಾದ ಕಾ.ನಾಗರತ್ನ ಎಸ್.ಜಿ ಮಾತನಾಡುತ್ತಾ ಗಣಿಬಾಧಿತ ಪ್ರದೇಶಗಳಲ್ಲಿ ಮಕ್ಕಳಲ್ಲಿ ಅಪೌಷ್ಟಿಕತೆ, ರಕ್ತ ಹೀನತೆ ನೀವಾರಿಸಲು ಅಇPಒIZ ಯೋಜನೆ ಅಡಿಯಲ್ಲಿ ಪೂರಕ ಪೌಷ್ಠಿಕ ಆಹಾರ ನೀಡಲು ಕ್ರಮಕೈಗೊಂಡಿರುವುದು ಅತ್ಯಂತ ಸ್ವಾಗತಾರ್ಹ.
ಬಳ್ಳಾರಿ ಹಾಗೂ ಸಂಡೂರು ತಾಲ್ಲೂಕುಗಳಲ್ಲಿ ಈ ಯೋಜನೆ ಪ್ರಾರಂಭವಾಗಿ ೪ ತಿಂಗಳಾಗುತ್ತಿದ್ದರೂ, ಬಿಸಿಯೂಟ ಕಾರ್ಮಿಕರಿಗೆ ನೀಡಬೇಕಾದ ಮಾಸಿಕ ರೂ.೫೦೦ ಗೌರವ ಸಂಭಾವನೆ ಇನ್ನೂವರೆಗೂ ನೀಡಿಲ್ಲ. ಈ ಹಿನ್ನಲೆಯಲ್ಲಿ ಕೂಡಲೆ ಅಇPಒIZ ಯೋಜನೆಯ ಗೌರವ ಸಂಭಾವನೆಯನ್ನು ಕೂಡಲೆ ಬಿಡುಗಡೆ ಮಾಡಬೇಕು. ಅಲ್ಲದೆ ಮೊಟ್ಟೆ ಸುಲಿದ ಹಣವನ್ನು ಸಹ ಎಲ್ಲಾ ಬಿಸಿಯೂಟ ನೌಕರರಿಗೆ ನೀಡಲು ಕ್ರಮಕೈಗೊಳ್ಳಬೇಕೆಂದು ಮನವಿ. ಎರಡೂ ಯೋಜನೆಯ ಹಣವನ್ನು ಮುಖ್ಯೋಪಾಧ್ಯಯರು ಹಾಗೂ ಎಸ್‌ಡಿಎಂಸಿ ಮುಖ್ಯಸ್ಥರ ಜಂಟಿ ಖಾತೆಗೆ ಹಾಕುವ ಬದಲು ಬಿಸಿಯೂಟ ಕಾರ್ಮಿಕರ ಖಾತೆಗೆ ನೇರ ಪಾವತಿ ಮಾಡಬೇಕು ಎಂದರು.
ಪ್ರತಿಭಟನೆಯಲ್ಲಿ ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷರಾದ ಕಾ.ಎ,ದೇವದಾಸ್, ಮುಖಂಡರಾದ ಕಿರಣ್ ಕುಮಾರ್, ಚೈತನ್ಯ, ಪ್ರವೀಣ್, ಬಿಸಿಯೂಟ ಕಾರ್ಮಿಕ ಮುಖಂಡರಾದ ಅನಸೂಯಮ್ಮ, ಶಾಂತಮ್ಮ, ಅಮ್ಮ ಮೇರಿ ಮುಂತಾದವರು ಉಪಸ್ಥಿತರಿದ್ದರು.
ಹಕ್ಕೊತ್ತಾಯಗಳು :
ರಾಜ್ಯದಲ್ಲಿ ಈಗಾಗಲೇ ವಿವಿಧ ಇಲಾಖೆಗಳಲ್ಲಿ ಅಡುಗೆಯವರಿಗೆ ಕನಿಷ್ಠ ವೇತನವಿದ್ದು ಅದರಂತೆ ಬಿಸಿ ಊಟ ಕಾರ್ಮಿಕರಿಗೂ ಕನಿಷ್ಠ ವೇತನ ಜಾರಿ ಮಾಡಿ.ಈ ಬಾರಿಯ ಬಜೆಟ್‌ನಲ್ಲಿ ಗೌರವ ಧನ ಹೆಚ್ಚಿಸಿ.ಮಾಸಿಕ ವೇತನವನ್ನು ಪ್ರತಿ ತಿಂಗಳು ೫ ನೇ ತಾರೀಖಿನೊಳಗೆ ಕಾರ್ಮಿಕರ ಬ್ಯಾಂಕ್ ಖಾತೆಗೆ ಪಾವತಿ ಮಾಡಬೇಕು, ಪ್ರತಿ ತಿಂಗಳು ವೇತನ ಚೀಟಿ ನೀಡಬೇಕು.ಸುರಕ್ಷಿತ ನಿವೃತ್ತಿ ಬದುಕು ಖಾತ್ರಿಪಡಿಸುವುದಕ್ಕಾಗಿ ನಿವೃತ್ತಿ ವೇತನಕ್ಕೆ ಒಳಪಡಿಸಿ, ಅಲ್ಲಿಯವರೆಗೆ ರೂ.೫ ಲಕ್ಷ ಇಡಿಗಂಟು ನೀಡಬೇಕು.
ಜೀವ ವಿಮೆಗೆ ಒಳಪಡಿಸಿ ಇಲಾಖೆಯಿಂದ ಪ್ರೀಮಿಯಂ ಪಾವತಿಸಬೇಕು.ಹತ್ತಿ ಬಟ್ಟೆಯ ಸಮವಸ್ತ್ರ ಹಾಗೂ ಕೈಗವಸು, ತಲೆಯ ಸ್ಕಾರ್ಫ್, ಏಪ್ರಾನ್‌ಗಳನ್ನು ಖಾತ್ರಿಪಡಿಸಿ.ಬಿಸಿಯೂಟ ಕಾರ್ಮಿಕರಿಗೆ ೧೦ ತಿಂಗಳ ಬದಲಾಗಿ ೧೨ ತಿಂಗಳು ಗೌರವಧನ ನೀಡಬೇಕು.ಬಿಸಿಯೂಟ ಕಾರ್ಮಿಕರನ್ನು ಖಾಯಂಗೊಳಿಸಿ ಹಾಗೂ ಸೇವಾ ಭದ್ರತೆ ಒದಗಿಸಿ.ಬಿಸಿಯೂಟ ಕಾರ್ಮಿಕರಿಗೆ ಮೊಟ್ಟೆ ಕುದಿಸಿ, ಸಿಪ್ಪೆ ಸುಲಿದ ಹಣವನ್ನು, ಗಣಿಬಾಧಿತ ಪ್ರದೇಶಗಳಲ್ಲಿ ಕಾಳುಗಳನ್ನು ಕುದಿಸಿ ನೀಡುವುದಕ್ಕಾಗಿನ ಪ್ರೋತ್ಸಾಹ ಧನವನ್ನು ಪ್ರತಿ ತಿಂಗಳು ಅವರ ಖಾತೆಗೆ ಜಮಾ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದ್ದಾರೆ .



