“ನಿಯತ್ತಿನ ಪ್ರಾಣಿ ಎಂದರೆ ನಾಯಿ ; ಎಚ್. ಸಿ. ಮಹದೇವಪ್ಪ ಹೇಳಿಕೆಗೆ ಡಿ.ಕೆ. ಸುರೇಶ್ ತಿರುಗೇಟು

ರಾಜಕೀಯ

ಅಧಿಕಾರ ಹಂಚಿಕೆ ವಿಚಾರವಾಗಿ ಸಚಿವ ಎಚ್.ಸಿ ಮಹದೇವಪ್ಪ ಅವರು ಬಾಲ ನಾಯಿಯನ್ನೇ ಅಲ್ಲಾಡಿಸಬಾರದು ಎಂದು ಹೇಳಿಕೆ ನೀಡಿರುವ ಬಗ್ಗೆ ಬಮುಲ್‌ ಅಧ್ಯಕ್ಷ ಡಿ.ಕೆ. ಸುರೇಶ್ ಅವರು ಪ್ರತಿಕ್ರಿಯಿಸಿದ್ದು, ಕಟ್ಟಾ ಕಾಂಗ್ರೆಸ್ಸಿಗರು ಋಣ ತೀರಿಸುವ ವ್ಯಕ್ತಿತ್ವ ಹೊಂದಿರುವವರು ಎಂದು ತಿಳಿಸಿದ್ದಾರೆ.

“ನಿಯತ್ತಿನ ಪ್ರಾಣಿ ಎಂದರೆ ನಾಯಿ. ಕಟ್ಟಾ ಕಾಂಗ್ರೆಸ್ಸಿಗರು ಯಜಮಾನನ ಋಣ ಸ್ಮರಣೆ ಮಾಡಿಕೊಂಡು, ಅದನ್ನು ತೀರಿಸುವ ನಾಯಿಗಳು” ಎಂದು ಬಮುಲ್‌ ಅಧ್ಯಕ್ಷ ಡಿ.ಕೆ. ಸುರೇಶ್ ಅವರು ತಿಳಿಸಿದರು. ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಡಿ.ಕೆ. ಸುರೇಶ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದರು.

ಅಧಿಕಾರ ಹಂಚಿಕೆ ವಿಚಾರವಾಗಿ ಸಚಿವ ಎಚ್.ಸಿ ಮಹದೇವಪ್ಪ ಅವರು ಬಾಲ ನಾಯಿಯನ್ನೇ ಅಲ್ಲಾಡಿಸಬಾರದು ಎಂದು ಹೇಳಿಕೆ ನೀಡಿರುವ ಬಗ್ಗೆ ಕೇಳಿದಾಗ, “ಅವರು ಯಾರನ್ನು ಉಲ್ಲೇಖಿಸಿ ಈ ರೀತಿ ಹೇಳಿದ್ದಾರೆ ಎಂಬ ಮಾಹಿತಿ ಇಲ್ಲ. ಕಟ್ಟಾ ಕಾಂಗ್ರೆಸ್ಸಿಗರು ಬೀದಿ ನಾಯಿಗಳಲ್ಲ. ನಿಯತ್ತಿನ ನಾಯಿಗಳು” ಎಂದರು.ಹಾಗಾದರೆ ಹೊರಗಡೆಯಿಂದ ಬಂದವರು ಬೀದಿ ನಾಯಿಗಳೇ ಎಂದು ಕೇಳಿದಾಗ, “ನಾನು ಹಾಗೆಂದು ಹೇಳಿಲ್ಲ. ಕಟ್ಟಾ ಕಾಂಗ್ರೆಸ್ಸಿಗರು ಋಣ ತೀರಿಸುವ ವ್ಯಕ್ತಿತ್ವ ಹೊಂದಿರುವವರು.

ಈ ನಾಯಿಗಳು ಬೀದಿ ನಾಯಿಗಳೇ ಆಗಿರಲಿ, ಸಾಕಿದ ನಾಯಿಗಳೇ ಆಗಿರಲಿ, ಯಜಮಾನನ ಋಣ ತೀರಿಸುತ್ತವೆಯೇ ಹೊರತು, ಬೇರೆ ರೀತಿ ಮಾಡುವುದಿಲ್ಲ. ಅದು ನಿಯತ್ತಿನ ನಾಯಿಗಳ ಸ್ವಭಾವ. ನಿಯತ್ತಿಗಾಗಿಯೇ ಜನ ನಾಯಿಗಳನ್ನು ಸಾಕುತ್ತಾರೆ.

ಬೇರೆಯವರು ನಮ್ಮ ಋಣ ತೀರಿಸುತ್ತಾರೋ ಇಲ್ಲವೋ, ನಾಯಿ ನಮ್ಮ ಋಣ ತೀರಿಸುತ್ತದೆ ಎಂಬ ಕಾರಣಕ್ಕೆ ನಾಯಿ ಸಾಕುತ್ತಾರೆ. ಬೀದಿ ನಾಯಿಗೆ ಊಟ ಹಾಕುತ್ತಾರೆ. ನಾಯಿ ನಿಯತ್ತಿನ ಬಗ್ಗೆ ಅನೇಕ ಗಾದೆಗಳು, ನಾಣ್ನುಡಿಗಳಿವೆ” ಎಂದು ಸ್ಪಷ್ಟನೆ ನೀಡಿದರು.

ಶಾಸಕರ ವಿದೇಶ ಪ್ರವಾಸ ಅಪಾರ್ಥ ಕಲ್ಪಿಸುವ ಅಗತ್ಯವಿಲ್ಲಶಾಸಕರ ಪ್ರವಾಸದ ಬಗ್ಗೆ ಕೇಳಿದಾಗ, “ಅವರು ಶಾಸಕರಾಗಿರುವುದರಿಂದ ಅವರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದಾರೆ. ನೀವು ಶಾಸಕರಾಗಿ ನಿಮ್ಮನ್ನು ಕರೆದುಕೊಂಡು ಹೋಗುತ್ತಾರೆ. ನೀವು ಶಾಸಕರಾಗಲು ಪ್ರಯತ್ನಿಸಿ.

ಕೆಲವರು ವಿಶ್ವಾಸಕ್ಕೆ ಹೋಗುತ್ತಾರೆ, ಮತ್ತೆ ಕೆಲವರು ದೇಶ ನೋಡಲು ಹೋಗುತ್ತಾರೆ, ಇನ್ನು ಕೆಲವರು ಅಧ್ಯಯನಕ್ಕಾಗಿ ಹೋಗುತ್ತಾರೆ. ಇಲ್ಲಿ ವ್ಯಾಖ್ಯಾನ ಮಾಡುವಂತದ್ದು ಇಲ್ಲ. ಆಗಾಗ್ಗೆ ಶಾಸಕರುಗಳು ವಿದೇಶಕ್ಕೆ ಹೋಗಿ ಬರುತ್ತಾರೆ. ಇದರಲ್ಲಿ ಅಪಾರ್ಥ ಕಲ್ಪಿಸುವ ಅಗತ್ಯವಿಲ್ಲ. ಕೆಲಸಗಳ ಒತ್ತಡ, ಗೊಂದಲಗಳ ಮಧ್ಯೆ ಕುಟುಂಬ ಹಾಗೂ ಸ್ನೇಹಿತರ ವಿದೇಶ ಪ್ರವಾಸ ಎಲ್ಲರಿಗೂ ನೆಮ್ಮದಿ ನೀಡುತ್ತದೆ” ಎಂದು ತಿಳಿಸಿದರು.

ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯದ ಬಗ್ಗೆ ಕೇಳಿದಾಗ, “ಪಂದ್ಯ ಚೆನ್ನಾಗಿತ್ತು, ಭಾರತ ಗೆದ್ದಿದೆ, ಇನ್ನು ಅನೇಕ ಪಂದ್ಯ ಗೆಲ್ಲಬೇಕಿದೆ” ಎಂದು ತಿಳಿಸಿದರು. ಆರ್‌ಎಸ್ಎಸ್ ನೋಂದಣಿಯಾಗಬೇಕು ಎಂಬ ಚರ್ಚೆ ಬಗ್ಗೆ ಕೇಳಿದಾಗ, “ನನಗೆ ಆ ವಿಚಾರದ ಬಗ್ಗೆ ಮಾಹಿತಿ ಇಲ್ಲ” ಎಂದು ತಿಳಿಸಿದರು.

Author