ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿ (MIO) ತೀರ್ಥಹಳ್ಳಿ ಕೇಂದ್ರದಲ್ಲಿ 81 ವರ್ಷದ ವೃದ್ಧೆಯೊಬ್ಬರ 40 ಸೆಂ.ಮೀ ಗಾತ್ರದ ಸುಮಾರು 6 ಕೆಜಿ ತೂಕದ ಭಾರೀ ಅಂಡಾಶಯ ಗಡ್ಡೆಯನ್ನು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮೂಲಕ ತೆರವುಗೊಳಿಸಲಾಗಿದೆ.
ಹೃದಯ ಸಂಬಂಧಿತ ಸಮಸ್ಯೆ ಹಾಗೂ ಮಧುಮೇಹದಿಂದ ಬಳಲುತ್ತಿದ್ದ ಈ ವೃದ್ಧೆ ಹೆಚ್ಚಿನ ಅಪಾಯದ ರೋಗಿಯಾಗಿದ್ದರೂ, ಸಮಗ್ರ ವೈದ್ಯಕೀಯ ತಯಾರಿ ಮತ್ತು ತಜ್ಞರ ತಂಡದ ಸಮನ್ವಯದಿಂದ ಸಂಕೀರ್ಣ ಸ್ಟೇಜಿಂಗ್ ಲ್ಯಾಪರೋಟಮಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲಾಯಿತು.
ಈ ಶಸ್ತ್ರಚಿಕಿತ್ಸೆಯನ್ನು ಮುಖ್ಯ ಶಸ್ತ್ರಚಿಕಿತ್ಸಕ ಡಾ. ಸುರೇಶ್ ಕ್ಲೆಮೆಂಟ್ ಡಿ’ಸೌಜಾ ಅವರ ನೇತೃತ್ವದಲ್ಲಿ ಡಾ. ದಿವ್ಯ ಜ್ಯೋತಿ ಅವರೊಂದಿಗೆ ನಡೆಸಲಾಯಿತು.
ಆಯುಷ್ಮಾನ್ ಭಾರತ್ ಯೋಜನೆಯಡಿ ಚಿಕಿತ್ಸೆ ನೀಡಲಾಗಿದ್ದು, ರೋಗಿಯ ಕುಟುಂಬಕ್ಕೆ ಯಾವುದೇ ಆರ್ಥಿಕ ಭಾರವಾಗಿಲ್ಲ. ಶಸ್ತ್ರಚಿಕಿತ್ಸೆಯ ನಂತರ ರೋಗಿ ಚೇತರಿಸಿಕೊಳ್ಳುತ್ತಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.



