ಬೆಂಗಳೂರು, ಮಂಡ್ಯ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ ಮೋಹನ್ ಅವರನ್ನು ಮೈಸೂರು ಗ್ರಾಮಾಂತರದ ಅಬಕಾರಿ ಉಪ ಆಯುಕ್ತರಾಗಿ ನಿಯೋಜಿಸುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದು ನಕಲಿ ಪತ್ರ ಎಂದು ಸ್ವತಃ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದು, ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಸಿಎಂ ಜಂಟಿ ಕಾರ್ಯದರ್ಶಿ ಅರುಣ್ ಫುರ್ಟಾಡೊ ಅವರು ವಿಧಾನಸೌಧದ ಠಾಣೆಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.
ಪತ್ರದ ಕುರಿತು ಮಾಹಿತಿ ನೀಡಿರುವ ಸಿಎಂ “ಯಾರೋ ಕೆಲವು ಕಿಡಿಗೇಡಿಗಳು ನನ್ನ ಕಚೇರಿಯ ನಕಲಿ ಟಿಪ್ಪಣಿಯೊಂದನ್ನು ಸೃಷ್ಟಿಸಿ, ಮಂಡ್ಯ ಜಿಲ್ಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾದ ಡಾ.ಕೆ ಮೋಹನ್ ಇವರನ್ನು ಮೈಸೂರು ಗ್ರಾಮಾಂತರದ ಅಬಕಾರಿ ಉಪ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು, ಅಪಪ್ರಚಾರದಲ್ಲಿ ತೊಡಗಿರುವುದು ಖಂಡನೀಯ ಮತ್ತು ಅತ್ಯಂತ ಗಂಭೀರ ಸ್ವರೂಪದ ಅಪರಾಧವಾಗಿದೆ.
ಈ ಬಗ್ಗೆ ನನ್ನ ಸಚಿವಾಲಯದ ಅಧಿಕಾರಿಗಳು ದೂರು ದಾಖಲಿಸಿದ್ದು, ಪೊಲೀಸ್ ಇಲಾಖೆ ಇದರ ಹಿಂದಿರುವ ದುಷ್ಟರನ್ನು ಪತ್ತೆ ಮಾಡಿ, ಕಾನೂನು ಕ್ರಮ ಕೈಗೊಳ್ಳಲಿದೆ” ಎಂದು ತಿಳಿಸಿದ್ದಾರೆ.
“ಇಂತಹ ನಕಲಿ ಸುದ್ದಿಗಳನ್ನು ನಂಬಿ ಶೇರ್ ಮಾಡುವ ಮುನ್ನ ಜಾಲತಾಣ ಬಳಕೆದಾರರು ಎಚ್ಚರಿಕೆವಹಿಸಬೇಕು.
ಈಗಿನ ಫೋಟೋಶಾಪ್ / ಎಐ ಯುಗದಲ್ಲಿ ವಾಟ್ಸ್‌ಆ್ಯಪ್ ಮಾಹಿತಿಗಳ ಸತ್ಯಾಸತ್ಯತೆಯನ್ನು ಪರಾಮರ್ಶಿಸದೆ ಇತರರ ಜೊತೆ ಹಂಚಿಕೊಳ್ಳುವುದು ಕೂಡ ಅಪರಾಧವೆ ಆಗಿದೆ.
ಸಕಾರಾತ್ಮಕ ಟೀಕೆಗೆ ನಾವು ಮುಕ್ತರಿದ್ದೇವೆ, ಸುಳ್ಳು ಸುದ್ದಿಗಳ ಅಪಪ್ರಚಾರವನ್ನು ಸಹಿಸುವುದಿಲ್ಲ” ಎಂದಿದ್ದಾರೆ.



