
ಬೆಂಗಳೂರು,ಭಾರತ ಮತ್ತು ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದವನ್ನು ಒಪ್ಪಿಕೊಂಡು ಸ್ವಾಗತಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಸಂಪೂರ್ಣ ಶರಣಾಗಿದ್ದಾರೆ.
ಮುಂದಿನ ದಿನಗಳಲ್ಲಿ ಈ ಒಪ್ಪಂದ 140 ಕೋಟಿ ಭಾರತೀಯರಿಗೆ, ಅದರಲ್ಲಿಯೂ ಮುಖ್ಯವಾಗಿ ದೇಶದ 72 ಕೋಟಿ ರೈತರ ಪಾಲಿಗೆ ಮರಣಶಾಸನವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿರುವ ಅವರು, ಎರಡು ದೇಶಗಳ ನಡುವಿನ ಸಂಬಂಧಗಳು ಸಮಾನತೆ ಮತ್ತು ಪರಸ್ಪರ ಗೌರವದ ಬುನಾದಿಯ ಮೇಲೆ ಸ್ಥಾಪನೆಯಾಗಬೇಕಾಗುತ್ತದೆ.
ಅದು ಒತ್ತಡ, ಬೆದರಿಕೆ ಮತ್ತು ಏಕಪಕ್ಷೀಯ ನೀತಿ-ನಿರ್ಧಾರಗಳ ಹೇರಿಕೆಯಿಂದ ನಡೆಯಬಾರದು. ಆದರೆ ಭಾರತ ಮತ್ತು ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದ ಕಾರ್ಯರೂಪಕ್ಕೆ ಬಂದಿರುವ ವಿಧಿ-ವಿಧಾನಗಳನ್ನು ಗಮನಿಸಿದರೆ, ಇದು ಒಡೆಯನ ಅಜ್ಞೆಗೆ ಸೇವಕ ತಲೆಯಾಡಿಸಿದಂತಿದೆ ಎಂದಿದ್ದಾರೆ.
ರಷ್ಯಾದಿಂದ ತೈಲ ಖರೀದಿಸುತ್ತಿದ್ದ ಭಾರತವನ್ನು ಮಣಿಸುವ ಉದ್ದೇಶದಿಂದಲೇ ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಯರ್ರಾಬಿರ್ರಿಯಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏರಿಸಿದ್ದರು.
ಈಗ ಅದನ್ನು ಶೇಕಡ 25ರಿಂದ ಶೇಕಡ 18ಕ್ಕೆ ಇಳಿಸಿ ಭಾರತಕ್ಕೆ ಮಹಾ ಉಪಕಾರ ಮಾಡಿದಂತೆ ನಾಟಕವಾಡಿದ್ದಾರೆ.
ಇದಕ್ಕೆ ಪ್ರತಿಯಾಗಿ ಅಮೆರಿಕದ ಸರಕುಗಳ ಮೇಲಿನ ಸುಂಕವನ್ನು ಭಾರತ ಶೂನ್ಯಕ್ಕಿಳಿಸಿದೆ. ಮೇಲ್ನೋಟದಲ್ಲಿಯೇ ಈ ತಾರತಮ್ಯದಿಂದ ಆಗಿರುವ ಅನ್ಯಾಯ ಸ್ಪಷ್ಟವಾಗಿ ಕಾಣುತ್ತಿದ್ದರೂ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದನ್ನು ಸ್ವಾಗತಿಸಿರುವುದು ಭಾರತದ 149 ಕೋಟಿ ಜನರಿಗೆ ಮಾಡುತ್ತಿರುವ ಮಹಾದ್ರೋಹವಾಗಿದೆ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸದ್ಯ ಭಾರತ ಶೇಕಡ 40ರಷ್ಟು ತೈಲವನ್ನು ರಷ್ಯಾದಿಂದ ಖರೀದಿಸುತ್ತಿದೆ. ಇದೀಗ ಡೊನಾಲ್ಡ್ ಟ್ರಂಪ್ ಅವರ ಆದೇಶಕ್ಕೆ ತಲೆಬಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾದಿಂದ ತೈಲ ಖರೀದಿಯನ್ನು ಕೈಬಿಟ್ಟು ಅಮೆರಿಕ ಮತ್ತು ವೆನಿಜುವೆಲಾ ದೇಶಗಳಿಂದ ತೈಲ ಖರೀದಿಸಲು ಒಪ್ಪಿಕೊಂಡಿರುವುದು ಈ ಒಪ್ಪಂದದ ಮುಖ್ಯಾಂಶವಾಗಿದೆ.
ಈ ಮೂಲಕ ಭಾರತ ಸಂಪೂರ್ಣ ಶರಣಾಗತಿಯಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಲಿದ್ದು, ಅದರ ಪರಿಣಾಮವಾಗಿ ಉಳಿದ ಅಗತ್ಯವಸ್ತುಗಳು ಕೂಡಾ ದುಬಾರಿಯಾಗಲಿದೆ ಎಂದಿದ್ದಾರೆ.
ಈ ಒಪ್ಪಂದದಿಂದ ಆಗಲಿರುವ ಸಣ್ಣಪುಟ್ಟ ಲಾಭಗಳನ್ನು ದೊಡ್ಡ ಸಾಧನೆ ಎಂದು ಬಿಂಬಿಸುತ್ತಿರುವ ಕೇಂದ್ರ ಸರ್ಕಾರ ಭಾರತೀಯರಿಗೆ, ಮುಖ್ಯವಾಗಿ ದೇಶದ ರೈತ ಸಮುದಾಯಕ್ಕೆ ಆಗುತ್ತಿರುವ ನಷ್ಟವನ್ನು ಉದ್ದೇಶಪೂರ್ವಕವಾಗಿ ಮುಚ್ಚಿಡುತ್ತಿದೆ.
ಈ ಒಪ್ಪಂದವನ್ನು ಅಮೆರಿಕದ ರೈತ ಸಮುದಾಯ ಒಕ್ಕೊರಲಿನಿಂದ ಸ್ವಾಗತಿಸಿ ಕುಣಿದಾಡುತ್ತಿರುವುದೇ ಈ ಒಪ್ಪಂದ ಭಾರತದ ರೈತರ ಪಾಲಿನ ಮರಣಶಾಸನವಾಗಲಿದೆ ಎಂಬುದಕ್ಕೆ ಸೂಚನೆಯಾಗಿದೆ ಎಂದು ಸಿಎಂ ಹೇಳಿದ್ದಾರೆ.



