ಶಿವಮೊಗ್ಗ,13 ವರ್ಷದ ಬಾಲಕಿಯೊಬ್ಬಳು ತನ್ನ 9 ವರ್ಷದ ಕಿರಿಯ ಸಹೋದರನೊಂದಿಗೆ ಮನೆಬಿಟ್ಟು ಕೆಂಪೇಗೌಡ ಬಸ್ನಿಲ್ದಾಣದಲ್ಲಿ ಸಾರಿಗೆ ಬಸ್ ಹತ್ತಿಕೊಂಡು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯವರೆಗೂ ಬಂದಿದ್ದಾಳೆ.
ನಿರಂತರ ಟ್ರೇಸಿಂಗ್ ಮೂಲಕ ಇವರಿಬ್ಬರನ್ನ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.. ಬೆಂಗಳೂರಿನ ಎಚ್ಎಎಲ್ ಪೊಲೀಸ್ ಠಾಣೆ ಲಿಮಿಟ್ಸ್ನ ಘಟನೆ ಇದಾಗಿದೆ.
ಮನೆಯಲ್ಲಿ ಬೈದರು ಎನ್ನುವ ಕಾರಣಕ್ಕೆ ಮನೆಯಿಂದ ಆಧಾರ್ ಕಾರ್ಡ್ ತಗೊಂಡು ಹೊರಟ ಇಬ್ಬರು ಬಸ್ನಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ.
ಶಕ್ತಿ ಯೋಜನೆಯ ಅಡಿಯಲ್ಲಿ ಆಧಾರ್ ಕಾರ್ಡ್ ತೋರಿಸಿ ತನಗೆ ಉಚಿತ ಟಿಕೆಟ್ ಮಾಡಿಸಿಕೊಂಡ ಬಾಲಕಿ, ತಮ್ಮನಿಗೆ ಉಚಿತ ಪ್ರಯಾಣದ ಟಿಕೆಟ್ ಮಾಡಿಸಿದ್ದಳು. ತಮ್ಮನ ಜೊತೆಗೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯವರೆಗೂ ಪ್ರಯಾಣ ಬೆಳೆಸಿದ್ದಳು.
ಈ ಮಧ್ಯೆ ಪೋಷಕರು ಮಕ್ಕಳು ಕಾಣದೇ ಪೊಲೀಸರ ಮೊರೆ ಹೋಗಿದ್ದರು. ಇನ್ನೂ ಪೊಲೀಸರು ಸಹ ತಡಮಾಡದೇ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಮಕ್ಕಳು ಬ್ಯಾಗ್ ಹಿಡಿದುಕೊಂಡು ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಹೋಗಿರುವುದು ಕಾಣಿಸಿದೆ.
ಬಸ್ನಿಲ್ದಾಣದ ದೃಶ್ಯಗಳನ್ನ ಪರಿಶೀಲಿಸಿದ ಅವರಿಗೆ ಇಬ್ಬರು ಮಕ್ಕಳು ಶಿವಮೊಗ್ಗದ ಬಸ್ ಹತ್ತಿರುವುದು ಗೊತ್ತಾಗಿತ್ತು. ಬಸ್ ನಂಬರ್ ಪಡೆದು ಸಾರಿಗೆ ಇಲಾಖೆಯ ಸಹಾಯದೊಂದಿಗೆ ಪೊಲೀಸರು ಅಲರ್ಟ್ ಆಗಿ ಎಲ್ಲಾ ಸ್ಟೇಷನ್ಗೆ ಮಾಹಿತಿ ನೀಡಿದ್ರು.
ಈ ಮಧ್ಯೆ ಭದ್ರಾವತಿಯಲ್ಲಿ ಮಕ್ಕಳನ್ನು ಗಮನಿಸಿದ ಸಾರ್ವಜನಿಕರು, ಬಸ್ನಲ್ಲಿದ್ದ ಮಕ್ಕಳನ್ನ ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಬೆಂಗಳೂರು ಪೊಲೀಸರು ಮಕ್ಕಳನ್ನ ರಕ್ಷಣೆ ಮಾಡಿ ಸುರಕ್ಷಿತವಾಗಿ ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ. ಬಳಿಕ ಮಕ್ಕಳಿಗೆ ಕೌನ್ಸಿಲಿಂಗ್ ನಡೆಸಿ ಪೋಷಕರ ಸುಪರ್ಧಿಗೆ ಒಪ್ಪಿಸಲಾಗಿದೆ.



