ಬೆಂಗಳೂರು, ಮಕ್ಕಳು ಸಾಮಾಜಿಕ ಜಾಲತಾಣ ಬಳಸುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲು ಚಿಂತನೆ ನಡೆಸುತ್ತಿದೆ ಎಂದು ಐಟಿ ಬಿಟಿ ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣ ಮೇಲಿನ ವಂದನಾ ನಿರ್ಣಯದ ಚರ್ಚೆ ವೇಳೆ ಸುರೇಶ್ ಕುಮಾರ್ ಪ್ರಸ್ತಾಪಿಸಿದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಇದು ಗಂಭೀರವಾದ ಸಮಸ್ಯೆಯಾಗಿದೆ. ಮಕ್ಕಳು ಸಾಮಾಜಿಕ ಜಾಲತಾಣ ಬಳಸುವುದನ್ನು ನಿಯಂತ್ರಿಸುವ ಸಂಬಂಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಈಗಾಗಲೇ ಚರ್ಚೆ ನಡೆಸುತ್ತಿದೆ. ನಾವು ರಾಜ್ಯದಲ್ಲೂ ಜವಾಬ್ದಾರಿಯುತ ಬಳಕೆದಾರರು ಎಐ ಹಾಗೂ ಸಾಮಾಜಿಕ ಜಾಲತಾಣಗಳ ಬಗ್ಗೆ ಏನು ಮಾಡಬೇಕು ಎಂದು ಈಗಾಗಲೇ ಸಮಾಲೋಚನೆ ಮಾಡುತ್ತಿದ್ದೇವೆ ಎಂದರು.
ಇದರ ಜೊತೆಗೆ ಮಾಹಿತಿ ತಂತ್ರಜ್ಞಾನ ಇಲಾಖೆ ಮೆಟಾ ಅವರ ಜೊತೆ ಡಿಜಿಟಲ್ ಡಿಟಾಕ್ಸ್ ಕಾರ್ಯಕ್ರಮ ಮಾಡುತ್ತಿದ್ದೇವೆ. ಈ ಕಾರ್ಯಕ್ರಮದಲ್ಲಿ ಸುಮಾರು 3 ಲಕ್ಷ ಮಕ್ಕಳು ಹಾಗೂ 1 ಲಕ್ಷ ಟೀಚರ್ ಇದರ ಭಾಗವಾಗಲಿದ್ದಾರೆ. ಈ ಬಗ್ಗೆ ಗಂಭೀರವಾಗಿ ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿಸಿದರು.
ಇದು ಗಭೀರವಾದ ವಿಚಾರವಾಗಿದೆ. ಈ ಬಗ್ಗೆ ಫಿನ್ಲ್ಯಾಂಡ್ ಕ್ರಮ ತೆಗೆದುಕೊಂಡಿದೆ. ಇಂಗ್ಲೆಂಡ್ ಕೂಡ ಈ ಬಗ್ಗೆ ಕ್ರಮ ಕೈಗೊಳ್ಳಲು ಚಿಂತನೆ ನಡೆಸುತ್ತಿದೆ. ಆಸ್ಟ್ರೇಲಿಯಾ ಎರಡು ತಿಂಗಳ ಹಿಂದೆ 16 ವರ್ಷದ ವರೆಗಿನ ಮಕ್ಕಳು ಸಾಮಾಜಿಕ ಜಾಲತಾಣ ಬಳಸುವುದಕ್ಕೆ ನಿರ್ಬಂಧ ಹೇರಿದೆ.
ನಾವೂ ರಾಜ್ಯದಲ್ಲಿ ಎಐ ವಿಚಾರವಾಗಿ ಹಾಗೂ ಸೋಷಿಯಲ್ ಮೀಡಿಯಾದ ಮೇಲೆ ಏನೆಲ್ಲ ಕ್ರಮ ತಗೊಳಬಹುದು ಎಂಬ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ ಎಂದರು.
ಇದಕ್ಕೂ ಮೊದಲು ವಿಷಯ ಪ್ರಸ್ತಾಪಿಸಿದ ಸುರೇಶ್ ಕುಮಾರ್, ಆಸ್ಟ್ರೇಲಿಯಾದಲ್ಲಿ 16 ವರ್ಷ ವರೆಗಿನ ಮಕ್ಕಳು ಸಾಮಾಜಿಕ ಜಾಲತಾಣಗಳ ಬಳಕೆಗೆ ನಿರ್ಬಂಧ ಹೇರಿದೆ. ಇದರಿಂದ ಅಪಾಯಕಾರಿ ಪರಿಸ್ಥಿತಿ ಉದ್ಭವವಾಗಿದೆ.
ಕೇಂದ್ರ ಸರ್ಕಾರ ನಿನ್ನೆ ಮಂಡಿಸಿದ ಆರ್ಥಿಕ ಸಮೀಕ್ಷೆಯಲ್ಲೂ ಸಾಮಾಜಿಕ ಜಾಲತಾಣಗಳಿಗೆ ಮಕ್ಕಳ ಎಕ್ಸ್ ಪೋಜರ್ ಹಾಗೂ ಅದರಿಂದ ಮಕ್ಕಳನ್ನು ಕಳೆದುಕೊಳ್ಳುವ ಬಗ್ಗೆ ಆತಂಕ ವ್ಯಕ್ತಪಡಿಸಿದೆ ಎಂದು ಹೇಳಿದರು.



