ಸಿ.ಜೆ.ರಾಯ್ ಕೇಸ್ ; ಐಟಿ ಅಧಿಕಾರಿಗಳ ಮೇಲೆ ಆರೋಪವಿಲ್ಲ

ಬೆಂಗಳೂರು

ಬೆಂಗಳೂರು, ಕಾನ್ಫಿಡೆಂಟ್ ಗ್ರೂಪ್‌ನ ಸಂಸ್ಥಾಪಕ ಮತ್ತು ಉದ್ಯಮಿ ಸಿ.ಜೆ.ರಾಯ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಕಾನ್ಫಿಡೆಂಟ್ ಗ್ರೂಪ್‌ನ ಎಂಡಿ. ಟಿ.ಎ. ಜೋಸೆಫ್ ಅವರು ಅಶೋಕನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಘಟನೆ ನಡೆದ ದಿನದ ಸಂಪೂರ್ಣ ವಿವರಗಳನ್ನು ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾರೆ.

ದೂರಿನಲ್ಲೇನಿದೆ?

ಸಿ.ಜೆ.ರಾಯ್ ಅವರು ಐಟಿ (ಆದಾಯ ತೆರಿಗೆ) ಅಧಿಕಾರಿಗಳಿಗೆ ಸ್ಟೇಟ್‌ಮೆಂಟ್ ನೀಡುವ ಸಲುವಾಗಿ ಎಂ.ಡಿ. ಟಿ.ಎ. ಜೋಸೆಫ್ ಅವರೊಂದಿಗೆ ಲ್ಯಾಂಗ್‌ಫೋರ್ಡ್ ರಸ್ತೆಯ ಕಚೇರಿಗೆ ಆಗಮಿಸಿದ್ದರು. ಕಚೇರಿಗೆ ಬಂದ ನಂತರ ರಾಯ್ ಅವರು ತಮ್ಮ ಕ್ಯಾಬಿನ್‌ಗೆ ತೆರಳಿದರು. “ನಾನು ತಾಯಿ ಜೊತೆ ಸ್ವಲ್ಪ ಮಾತನಾಡಬೇಕು” ಎಂದು ಹೇಳಿ ಒಳಗೆ ಹೋದರು. ಕ್ಯಾಬಿನ್ ಒಳಗೆ ಹೋಗುವ ಮೊದಲು, “ಯಾರನ್ನೂ ಕೆಲಕಾಲ ಒಳಗೆ ಬಿಡಬೇಡಿ” ಎಂದು ಅಲ್ಲಿನ ಭದ್ರತಾ ಸಿಬ್ಬಂದಿಗೆ ಸಿ.ಜೆ.ರಾಯ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.

ಹತ್ತು ನಿಮಿಷಗಳ ನಂತರ ಟಿ.ಎ. ಜೋಸೆಫ್ ಅವರು ಕ್ಯಾಬಿನ್ ಬಳಿ ಹೋಗಿ ನೋಡಿದಾಗ ಸೆಕ್ಯೂರಿಟಿ ಸಿಬ್ಬಂದಿ ರಾಯ್ ಅವರ ಸೂಚನೆಯ ಬಗ್ಗೆ ತಿಳಿಸಿದರು. ಮತ್ತೊಂದು ಹತ್ತು ನಿಮಿಷ ಕಳೆದು ಜೋಸೆಫ್ ಅವರು ಡೋರ್ ತಟ್ಟಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.ಬಾಗಿಲು ಒಳಗಿನಿಂದ ಲಾಕ್ ಆಗಿದ್ದ ಕಾರಣ, ಅನುಮಾನಗೊಂಡು ಬಾಗಿಲು ಒಡೆದು ಒಳಗೆ ಹೋದಾಗ ಸಿ.ಜೆ.ರಾಯ್ ಅವರು ತಮ್ಮ ಚೇರ್ ಮೇಲೆಯೇ ರಕ್ತದ ಮಡುವಿನಲ್ಲಿ ಬಿದ್ದಿದ್ದರು.

ತಕ್ಷಣವೇ ಆಂಬುಲೆನ್ಸ್‌ಗೆ ಕರೆ ಮಾಡಲಾಯಿತು. ಸ್ಥಳಕ್ಕೆ ಬಂದ ವೈದ್ಯಕೀಯ ಸಿಬ್ಬಂದಿ ಪಲ್ಸ್ ಚೆಕ್ ಮಾಡಿದಾಗ ಅದು ಸ್ಥಗಿತಗೊಂಡಿತ್ತು. ನಂತರ ಅವರನ್ನು ಕೂಡಲೇ ಎಚ್‌ಎಸ್‌ಆರ್ ಲೇಔಟ್‌ನ ನಾರಾಯಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗಲಿಲ್ಲ.ಟಿ.ಎ. ಜೋಸೆಫ್ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆದಾಯ ತೆರಿಗೆ (IT) ಅಧಿಕಾರಿಗಳ ಮೇಲೆ ಯಾವುದೇ ರೀತಿಯ ನೇರ ಆರೋಪ ಮಾಡಿಲ್ಲ. ಕಚೇರಿಗೆ ಐಟಿ ಅಧಿಕಾರಿಗಳಿಗೆ ಹೇಳಿಕೆ ನೀಡಲು ಬಂದಿದ್ದರೂ, ಸಾವಿಗೆ ಅವರೇ ಕಾರಣ ಎಂದು ಎಲ್ಲೂ ಉಲ್ಲೇಖಿಸಿಲ್ಲ.

ಸಿ.ಜೆ.ರಾಯ್ ಅವರಂತಹ ಧೈರ್ಯವಂತ ವ್ಯಕ್ತಿ ಆತ್ಮಹತ್ಯೆಗೆ ಶರಣಾಗುವಂತಹ ಒತ್ತಡ ಏನಿತ್ತು? ಅವರ ಸಾವಿನ ಹಿಂದೆ ಯಾವುದಾದರೂ ಗುಪ್ತ ಕಾರಣಗಳಿವೆಯೇ? ಈ ಬಗ್ಗೆ ಸಂಪೂರ್ಣ ಮತ್ತು ಕೂಲಂಕುಷ ತನಿಖೆ ನಡೆಸಬೇಕು ಎಂದು ಟಿ.ಎ. ಜೋಸೆಫ್ ಅಶೋಕನಗರ ಪೊಲೀಸರಿಗೆ ನೀಡಿದ ದೂರಿನಲ್ಲಿ ಮನವಿ ಮಾಡಿದ್ದಾರೆ.

ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಯ ವರದಿ ಮತ್ತು ಕಚೇರಿಯ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ಮುಂದುವರಿಸಿದ್ದಾರೆ.

Author