ಶಿವಮೊಗ್ಗ ನಗರದ ಹೃದಯ ಭಾಗವಾದ ನೆಹರು ರಸ್ತೆಯಲ್ಲಿ ಹಾದು ಹೋಗುವ ರಾಜಕಾಲುವೆಯನ್ನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದು ಒತ್ತುವರಿ ಮಾಡಿದ ಹಿನ್ನೆಲೆ ಶಿವಮೊಗ್ಗ ನಗರದ ನೆಹರು ರಸ್ತೆಯ ವರ್ತಕರ ಸಂಘದ ಅಧ್ಯಕ್ಷ ಸಾಧನ ಟ್ರೇಡರ್ಸ್ ನ ರಂಗನಾಥ್ ನೇತೃತ್ವದಲ್ಲಿ ವರ್ತಕರು ಹಾಗೂ ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯೆ ಅರ್ಚನ ನಿರಂಜನ್ ಅವರು ಮಹಾನಗರ ಪಾಲಿಕೆಯ ಆಯುಕ್ತರಿಗೆ ಈ ಕೂಡಲೇ ರಾಜಕಾಲುವೆ ಒತ್ತುವರಿ ತೆರವುಗೊಳಿಸಿ ಹಾಗೂ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ದೂರು ಸಲ್ಲಿಸಿ ಪಾಲಿಕೆ ಆಯುಕ್ತ ಮಾಯಣ್ಣ ಗೌಡರಿಗೆ ಮನವಿ ಮಾಡಿದ್ದರು.
ಶಿವಮೊಗ್ಗ ಸಂಚಾರಿ ಪೊಲೀಸ್ ಇಲಾಖೆ ಕೂಡ ರಾಜಕಾಲುವೆ ಹಾಗೂ ಕನ್ಸೆರ್ವೆನ್ಸಿ ಸಹ ಒತ್ತುವರಿ ಮಾಡುವ ಮೂಲಕ ಕಟ್ಟಡ ನಿರ್ಮಿಸಿದ್ದಾರೆ ಇದನ್ನು ತೆರವುಗೊಳಿಸಿ ಹಾಗೂ ನಗರದ ನೆಹರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ತಡೆಗಟ್ಟಲು ಸುಗಮ ಸಂಚಾರದ ವ್ಯವಸ್ಥೆಗೆ ಹಾಗೂ ಪಾರ್ಕಿಂಗ್ ವ್ಯವಸ್ಥೆಗೆ ಅನುವು ಮಾಡಿಕೊಡಲು ಮಹಾನಗರ ಪಾಲಿಕೆಗೆ ಪತ್ರ ಬರೆದಿದ್ದರು.

ಸಾರ್ವಜನಿಕರು ರಾಜಕಾಲವೇ ಒತ್ತುವರಿ ತೆರವುಗೊಳಿಸಲು ಮೀನಾ ಮೇಷ ಎಣಿಸುತ್ತಿರುವ ಮಹಾನಗರ ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಸಂಬಂಧ ಮಹಾನಗರ ಪಾಲಿಕೆಯು ರಾಜ ಕಾಲವೇ ಒತ್ತುವರಿ ತೆರವುಗೊಳಿಸಲು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬ ಸುದ್ದಿಯನ್ನು ಇ-ಕನ್ನಡ ಡಿಜಿಟಲ್ ಸುದ್ದಿ ಮಾಧ್ಯಮ ಸುದ್ದಿಯನ್ನು ಬಿತ್ತರಿಸಿತ್ತು.

ಲೋಕಾಯುಕ್ತದಲ್ಲಿ ಸುಮೋಟೋ ಪ್ರಕರಣ ಲೋಕಾಯುಕ್ತ ನ್ಯಾಯಮೂರ್ತಿಗಳು ಸಾರ್ವಜನಿಕ ಹಿತಾಸಕ್ತಿಯ ಸುದ್ದಿ ಹಾಗೂ ಸಾರ್ವಜನಿಕರ ಅಹವಾಲನ್ನು ಗಮನಿಸಿ ಪಾಲಿಕೆ ಅಧಿಕಾರಿಗಳ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಿದ್ದಾರೆ. ಮಾನ್ಯ ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಫಣೀಂದ್ರ ಅವರು ಮಹಾನಗರ ಪಾಲಿಕೆಯ ಅಧಿಕಾರಿಗಳಾದ ಶ್ರೀಮತಿ ಜ್ಯೋತಿ ಎಇಇ ಹಾಗೂ ಜೆಇ ವಸಂತ್ ಕುಮಾರ್ ವಿರುದ್ದ ಸುಮೋಟೊ ಪ್ರಕರಣ ದಾಖಲಿಸಿದ್ದಾರೆ. ಈ ಸಮಸ್ಯೆ ಕುರಿತಾಗಿ ಶೀಘ್ರ ಕ್ರಮಕ್ಕೆ ಸೂಚಿಸಿರುತ್ತಾರೆ.
ಜೊತೆಗೆ ಮಹಾನಗರ ಪಾಲಿಕೆ ಆಯುಕ್ತರಾದ ಮಾಯಣ್ಣ ಗೌಡ ಹಾಗೂ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳೆಕಟ್ಟಿ ಅವರಿಗೂ ಕೈಗೊಂಡ ಕ್ರಮದ ಬಗ್ಗೆ ಮಾಹಿತಿಯನ್ನು ರವಾನಿಸಿದ್ದಾರೆ.

ಒತ್ತುವರೇ ತೆರವಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆಗೆ ಸಿದ್ಧತೆ
ನೆಹರು ರಸ್ತೆಯ ವರ್ತಕರು ಮತ್ತು ವಿವಿಧ ಸಂಘಟನೆಗಳು ಸಾರ್ವಜನಿಕರು ಪಕ್ಷಾತೀತವಾಗಿ ಜನವರಿ 30 ರೊಳಗೆ ರಾಜಕಾಲುವೆ ಒತ್ತುವರಿ ತೆರವು ಗೊಳಿಸದಿದ್ದಲ್ಲಿ ನೆಹರು ರಸ್ತೆಯ ಅಂಗಡಿ ಮುಂಗಟ್ಟು ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸುವ ಚಿಂತನೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಪಾಲಿಕೆ ಅಧಿಕಾರಿಗಳಿಂದ ಶಿಕ್ಷಣ ಸಂಸ್ಥೆಗೆ ನೋಟಿಸ್
ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯೆ ಶ್ರೀಮತಿ ಅರ್ಚನ ನಿರಂಜನ್ ನೀಡಿರುವ ದೂರು ಆಧರಿಸಿ ಮಹಾನಗರ ಪಾಲಿಕೆಯ ಅಧಿಕಾರಿಗಳು ದಿನಾಂಕ 22-01-2026 ರಂದು ಶಿಕ್ಷಣ ಸಂಸ್ಥೆಗೆ ನೋಟೀಸ್ ಜಾರಿ ಮಾಡಿರುವುದಾಗಿ ತಿಳಿದುಬಂದಿದೆ.

ಪಾಲಿಕೆ ಕಾರ್ಯವೈಖರಿ ಬಗ್ಗೆ ಚಾಟಿ ಬೀಸಿದ್ದ ಮಾನ್ಯ ಉಪಲೋಕಾಯುಕ್ತರು
ಈ ಹಿಂದೆ ಮಾನ್ಯ ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಫಣೀಂದ್ರ ಅವರು ಶಿವಮೊಗ್ಗ ನಗರಕ್ಕೆ ಭೇಟಿ ನೀಡಿದಾಗ ಅಂದು ಪಾಲಿಕೆ ಆಯುಕ್ತರಾಗಿದ್ದ ಕವಿತಾ ಯೋಗಣ್ಣನವರಿಗೆ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತೆ ಹಾಗೂ ಅವ್ಯವಸ್ಥೆ ಬಗ್ಗೆ ಅಂದೇ ಪಾಲಿಕೆ ಅಧಿಕಾರಿಗಳಿಗೆ ಚಾಟಿ ಬೀಸಿದ್ದರು ಇಷ್ಟಾದರೂ ಪಾಲಿಕೆ ಅಧಿಕಾರಿಗಳು ಬುದ್ಧಿ ಕಲಿತಂತೆ ಕಂಡುಬಂದಿಲ್ಲ. ಇದೀಗ ಮಹಾನಗರ ಪಾಲಿಕೆ ಆಯುಕ್ತರಾಗಿ ಮಾಯಣ್ಣ ಗೌಡರು ಬಂದಿದ್ದರಾದರೂ ಅದೇ ಅವ್ಯವಸ್ಥೆ , ಪಾಲಿಕೆ ವ್ಯಾಪ್ತಿಯ ಸಮಸ್ಯೆಗಳು ಮುಂದುವರೆದಿದೆ.
ಇನ್ನಾದರೂ ಮಹಾನಗರ ಪಾಲಿಕೆ ಆಯುಕ್ತರು ಮತ್ತು ಅಧಿಕಾರಿಗಳು ಎಚ್ಚೆತ್ತುಕೊಂಡು ರಾಜಕಾಲುವೆ ಒತ್ತುವರಿ ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡಬೇಕಾಗಿದೆ. ಸಾರ್ವಜನಿಕರು ನೀಡುವ ದೂರಿನ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು ನಿರ್ಲಕ್ಷ ವಹಿಸದೆ ತಕ್ಷಣವೇ ಕ್ರಮ ಕೈಗೊಂಡಿದ್ದಲ್ಲಿ ಲೋಕಾಯುಕ್ತರು ಮಧ್ಯ ಪ್ರವೇಶ ಮಾಡುವುದು ತಪ್ಪುತ್ತಿತ್ತು ಅಲ್ಲವೇ?



