ರಾಜಸ್ಥಾನ,ಜೈಪುರ್, ವ್ಯಕ್ತಿಯೊಬ್ಬ ತನ್ನ ಮಗಳ ಮದುವೆಯು ಸ್ಮರಣೀಯವಾಗಿ ಉಳಿಯಬೇಕೆಂದು 25 ಲಕ್ಷ ರೂ. ವೆಚ್ಚದಲ್ಲಿ 3 ಕೆ.ಜಿ. ಬೆಳ್ಳಿಯಿಂದ ವಿವಾಹ ಆಹ್ವಾನ ಪತ್ರಿಕೆ ಮಾಡಿಸಿ ಗಮನ ಸೆಳೆಯುತ್ತಿದ್ದಾರೆ.ಜೈಪುರದ ಶಿವ್ ಜೋಹ್ರಿ ಎಂಬವರು ತಮ್ಮ ಪುತ್ರಿ ಶ್ರುತಿ ಜೋಹ್ರಿ ಅವರ ವಿವಾಹವನ್ನು ಅಸ್ಮರಣೀಯವಾಗಿಸಲು ಬಯಸಿದರು.
ಹೀಗಾಗಿ ಮಗಳ ಮದುವೆಗೆ ಏನಾದರೂ ವಿಶೇಷವಾದದ್ದನ್ನು ಮಾಡಬೇಕೆಂದು ಬಯಸಿದರು. ಅದಕ್ಕಾಗಿಯೇ ಅವರು, ಬೆಳ್ಳಿಯಿಂದ ಮದುವೆ ಆಮಂತ್ರಣ ಪತ್ರಿಕೆಯನ್ನು ಮಾಡಿಸಿದರು.
ಇದು ಕೇವಲ ಆಹ್ವಾನ ಪತ್ರಿಕೆಯಲ್ಲ, ಇದು ಪತ್ರಿಯ ಮೇಲಿನ ತಂದೆಯ ಪ್ರೀತಿಗೆ ಸಾಕ್ಷಿಯಾಗಿದೆ. ಬೆಳ್ಳಿ ದರ ಗಗನಕ್ಕೇರುತ್ತಿದ್ದರೂ, ಅದನ್ನೂ ಲೆಕ್ಕಿಸದೇ ಶಿವ್ ಜೋಹ್ರಿ 25 ಲಕ್ಷ ವೆಚ್ಚದಲ್ಲಿ ಆಮಂತ್ರಣ ಪತ್ರಿಕೆ ಮಾಡಿಸಿರುವುದು ವಿಶೇಷ.
ಬೆಳ್ಳಿ ವಿವಾಹ ಆಮಂತ್ರಣ ಪತ್ರಿಕೆ ವಿನ್ಯಾಸಗೊಳಿಸಿದರು ಕೈಯಿಂದಲೇ 65 ದೇವರುಗಳ ಕಲಾಕೃತಿ ಕೆತ್ತನೆ:

ಆಮಂತ್ರಣ ಪತ್ರಿಕೆ 8 ಇಂಚು ಉದ್ದ, 6.5 ಇಂಚು ಅಗಲ ಹಾಗೂ 3 ಇಂಚು ಆಳ ಇದೆ. ಕಲಾವಿದರು ಇಷ್ಟು ದೊಡ್ಡ ಬೆಳ್ಳಿ ಆಮಂತ್ರಣ ಪತ್ರಿಕೆ ತಯಾರಿಕೆಯಲ್ಲಿ ತಮ್ಮ ಕೌಶಲ್ಯವನ್ನು ಅನಾವರಣಗೊಳಿಸಿದ್ದಾರೆ. ಈ ಆಹ್ವಾನ ಪತ್ರಿಕೆ ಸಿದ್ಧಪಡಿಸಲು ಕಲಾವಿದರಿಗೆ ಒಂದು ವರ್ಷ ಹಿಡಿದಿದೆ.
ಆಮಂತ್ರಣ ಪತ್ರಿಕೆಯನ್ನು 128 ಪ್ರತ್ಯೇಕ ಭಾಗಗಳನ್ನು ಜೋಡಿಸಿ ತಯಾರಿಸಲಾಗಿದೆ. ಬೆಳ್ಳಿ ಆಹ್ವಾನ ಪತ್ರಿಕೆಯು ಗಣೇಶ, ರಾಮ ದರ್ಬಾರ್, ಶಿವ-ಪಾರ್ವತಿ ಮತ್ತು ಲಕ್ಷ್ಮಿನಾರಾಯಣ ಸೇರಿದಂತೆ 65 ದೇವರುಗಳ ಸಂಕೀರ್ಣ ಕಲಾಕೃತಿಗಳು ಕೈಯಿಂದ ಕೆತ್ತಲಾಗಿದೆ.ಆಮಂತ್ರಣ ಪತ್ರಿಕೆ ತಯಾರಿಕೆಯಲ್ಲಿ ಒಂದೇ ಒಂದು ಮೊಳೆ ಅಥವಾ ಸ್ಕ್ರೂ ಕೂಡಾ ಬಳಸಲಾಗಿಲ್ಲ.
ಎಲ್ಲವನ್ನೂ ಸಾಂಪ್ರದಾಯಿಕ ರೀತಿಯಲ್ಲಿ ಒಟ್ಟಿಗೆ ಹೊಂದಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಒಂದೇ ಚೌಕಟ್ಟಿನಲ್ಲಿ ಅದರ ಸೌಂದರ್ಯವನ್ನು ಹಾಳು ಮಾಡದೇ ಹಲವು ಭಾಗಗಳನ್ನು ಜೋಡಿಸಿದ್ದು ಕಲಾವಿದರು ಎದುರಿಸಿದ ದೊಡ್ಡ ಸವಾಲು ಎಂದು ಶಿವ್ ಜೋಹ್ರಿ ಹೇಳಿದರು.

ಕಲಾಕೃತಿಯಿಂದ ಕಂಗೊಳಿಸುವ ಪತ್ರಿಕೆ
ಆಮಂತ್ರಣ ಪತ್ರಿಕೆಯ ಮಧ್ಯದಲ್ಲಿ ಗಣಪತಿ, ಬಲ ಭಾಗದಲ್ಲಿ ಪಾರ್ವತಿ ದೇವತೆ, ಎಡಭಾಗದಲ್ಲಿ ಪರಮೇಶ್ವರನಿದ್ದಾನೆ. ಕೆಳಗೆ ಲಕ್ಷ್ಮಿ ಮತ್ತು ವಿಷ್ಣು ದೇವತೆಗಳನ್ನು ಕೆತ್ತಲಾಗಿದೆ. ಜೊತೆಗೆ ತಿರುಪತಿ ಬಾಲಾಜಿಯ ಎರಡು ಕಲಾಕೃತಿಗಳಿವೆ. ದೇವರ ದ್ವಾರಪಾಲಕರು, ದೀಪಗಳನ್ನು ಹಿಡಿದಿರುವ ಸ್ತ್ರೀ ಕಲಾಕೃತಿಗಳೂ ಇವೆ. ಪತ್ರಿಕೆಯ ಹೊರಭಾಗದಲ್ಲಿ (ಅಂಚುಗಳ ಉದ್ದಕ್ಕೂ) ಎಂಟು ದೇವತೆಗಳ ಕಲಾಕೃತಿಗಳಿವೆ.



