ಬೆಂಗಳೂರು, ವಿಧಾನಮಂಡಲದ ಉಭಯ ಸದನಗಳ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡುವುದು ಸಂವಿಧಾನಬದ್ಧ ಕರ್ತವ್ಯ. ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣ ತಮಗೆ ಇಷ್ಟವಿಲ್ಲವೆಂದು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುವುದಿಲ್ಲವೆಂದು ರಾಜ್ಯಪಾಲರು ನಿರಾಕರಿಸಲು ಸಂವಿಧಾನದಲ್ಲಿ ಅವಕಾಶವಿಲ್ಲ ಎಂದು ಖ್ಯಾತ ಹಿರಿಯ ವಕೀಲ, ಮಾಜಿ ಅಡ್ವೋಕೇಟ್ ಜನರಲ್ ಅಶೋಕ್ ಹಾರನಹಳ್ಳಿ ಹೇಳಿದರು.
ಜಂಟಿ ಅಧಿವೇಶನದಲ್ಲಿ ಕೇಂದ್ರ ಸರ್ಕಾರವನ್ನು ಟೀಕೆ ಮಾಡುವ ಅಂಶಗಳಿರುವ ಭಾಷಣದ ಪ್ರತಿಯನ್ನು ಜಂಟಿ ಓದಲು ರಾಜ್ಯಪಾಲ ಗೆಹ್ಲೋಟ್ ಆಕ್ಷೇಪಣೆ ವ್ಯಕ್ತಪಡಿಸಿದ್ದರಿಂದ ಸಂದಿಗ್ಧ ಪರಿಸ್ಥಿತಿ ತಲೆದೋರಿದೆ. ರಾಜ್ಯಪಾಲರ ಬಯಕೆಯಂತೆ ಭಾಷಣ ಬದಲಾವಣೆ ಮಾಡಲು ರಾಜ್ಯ ಸರ್ಕಾರ ಸಿದ್ಧವಿಲ್ಲ. ಹೀಗಾಗಿ, ಸಂವಿಧಾನದ ಜಿಜ್ಞಾಸೆ ಮೂಡಿದೆ.ಸಂವಿಧಾನದ ವಿಧಿ 176ರ ಪ್ರಕಾರ ರಾಜ್ಯಪಾಲರು ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುವುದು ಕಡ್ಡಾಯ. ಭಾಷಣ ಮಾಡಲು ರಾಜ್ಯಪಾಲರು ನಿರಾಕರಿಸಲು ಅವಕಾಶವಿಲ್ಲ. ಸಾರ್ವತ್ರಿಕ ಚುನಾವಣೆ ನಡೆದ ಬಳಿಕ ಹೊಸದಾಗಿ ರಚನೆಯಾದ ವಿಧಾನಸಭೆ ಮತ್ತು ಪ್ರತಿ ವರ್ಷದ ಮೊದಲ ವಿಧಾನಸಭೆ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಕಡ್ಡಾಯವಾಗಿ ಭಾಷಣ ಮಾಡಬೇಕಾಗುತ್ತದೆ. ಅದು ರಾಜ್ಯಪಾಲರ ಸಂವಿಧಾನಬದ್ಧ ಕರ್ತವ್ಯ ಕೂಡ ಆಗಿದೆ ಎಂದು ಅಶೋಕ್ ಹಾರನಹಳ್ಳಿ ತಿಳಿಸಿದರು.

ಜಂಟಿ ಅಧಿವೇಶನದ ಸಂದರ್ಭದಲ್ಲಿ ರಾಜ್ಯಪಾಲರು ರಾಜ್ಯ ಸರ್ಕಾರ ಸಿದ್ಧಪಡಿಸಿಕೊಟ್ಟ ಭಾಷಣದ ಪ್ರತಿಯನ್ನು ಓದಬೇಕಾಗುತ್ತದೆ. ಈ ಭಾಷಣವು ರಾಜ್ಯ ಸರ್ಕಾರದ ಧ್ವನಿಯಾಗಿರುತ್ತದೆ. ಹಾಗೆಯೇ, ರಾಜ್ಯಪಾಲರು ಸಹ ಕೇಂದ್ರ ಸರ್ಕಾರದಿಂದ ನೇಮಕಗೊಂಡವರಾಗಿದ್ದರಿಂದ, ರಾಜ್ಯ ಸರ್ಕಾರದ ಅಪೇಕ್ಷೆಯಂತೆ ಕೇಂದ್ರ ಸರ್ಕಾರದ ನಿಲುವನ್ನು ಟೀಕೆ ಮಾಡುವಂತಹ ಭಾಷಣವನ್ನು ಜಂಟಿ ಅಧಿವೇಶನದಲ್ಲಿ ಓದುವುದು ಸಹ ಅವರಿಗೆ ಕಷ್ಟವಾಗುತ್ತದೆ.
ಇಂತಹ ಸಂದರ್ಭದಲ್ಲಿ ರಾಜ್ಯಪಾಲರು ತಮಗೆ ಇಷ್ಟವಿಲ್ಲದ ಅಂಶಗಳನ್ನು ಸದನದಲ್ಲಿ ಓದದೇ ಇರಲೂ ಅವಕಾಶವಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.



