ಬೆಂಗಳೂರು | ಸಚಿವ ಈಶ್ವರ ಖಂಡ್ರೆ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆ

ಬೆಂಗಳೂರು

ಬೆಂಗಳೂರು,ಸಚಿವ ಈಶ್ವರ ಖಂಡ್ರೆ ಅಖಿಲ ಭಾರತ ವೀರಶೈವ ಮಹಾಸಭಾದ 24ನೇ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಇಂದು ನಗರದ ಮಹಾಸಭಾದ ಕಚೇರಿಯಲ್ಲಿ ನಡೆದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ನೆರೆದಿದ್ದ 56 ಸದಸ್ಯರು ಖಂಡ್ರೆಯವರನ್ನು ಅವಿರೋಧವಾಗಿ ಆಯ್ಕೆ ಮಾಡಿದರು.

12.40ಕ್ಕೆ ಶುರುವಾಗಿ 2.30 ಮುಕ್ತಾಯವಾದ ಸಭೆಯಲ್ಲಿ ಪ್ರಭಾಕರ ಕೋರೆ, ಅಣಬೇರು ರಾಜಣ್ಣ, ಚರಂತಿಮಠ ಮುಂತಾದ ಪ್ರಮುಖ ನಾಯಕರು ಉಪಸ್ಥಿತರಿದ್ದರು.ಶಾಮನೂರು ಶಿವಶಂಕರಪ್ಪ ಅವರು ರಾಷ್ಟ್ರೀಯ ಅಧ್ಯಕ್ಷರಾಗಿದ್ದಾಗ ಖಂಡ್ರೆ ಹಿರಿಯ ಉಪಾಧ್ಯಕ್ಷರಾಗಿದ್ದರು. ಶಾಮನೂರು ಅವರು ಲಿಂಗೈಕ್ಯರಾದ ನಂತರ ತೆರವಾದ ಸ್ಥಾನಕ್ಕೆ ಈಗ ಅವರಿಗೆ ಭಡ್ತಿ ಸಿಕ್ಕಂತಾಗಿದೆ.

ಸ್ಪರ್ಧೆಯ ಮುಂಚೂಣಿಯಲ್ಲಿರುವ ಸಚಿವ ಈಶ್ವರ ಖಂಡ್ರೆ ಹಾಗೂ ಪ್ರಬಲ ಸ್ಪರ್ಧಿಯೆಂದು ಬಿಂಬಿತವಾಗಿರುವ ಉದ್ಯಮಿ ಪ್ರಭಾಕರ ಕೋರೆ ಒಮ್ಮತದ ಅಭ್ಯರ್ಥಿಯ ಆಯ್ಕೆಗೆ ಕರೆ ಕೊಟ್ಟಿದ್ದರು.

ಆಯ್ಕೆಯ ನಂತರ ಸುದ್ದಿಗೋಷ್ಠಿ ನಡೆಸಿದ ಖಂಡ್ರೆ ತಮ್ಮನ್ನು ಮಹಾಸಭಾದ ನೂತನ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದಕ್ಕಾಗಿ ಕಾರ್ಯಕಾರಿ ಸಮಿತಿಗೆ ಧನ್ಯವಾದ ಅರ್ಪಿಸಿದರು. ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆಯಲ್ಲ. ಹೀಗಾಗಿ ಸಮಾಜದ ಎಲ್ಲ ಒಳ ಪಂಗಡಗಳನ್ನು ಒಗ್ಗೂಡಿಸಲು ತಾವು ಶ್ರಮಿಸುವುದಾಗಿ ತಿಳಿಸಿದರು.

Author