ಬೆಂಗಳೂರು,ಮಲಮಗಳು ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದ್ದ ಡಿಜಿಪಿ ಡಾ.ಕೆ.ರಾಮಚಂದ್ರ ರಾವ್ ಅವರ ರಾಸಲೀಲೆಗಳ ವಿಡಿಯೋಗಳು ಬಹಿರಂಗವಾಗಿ ಹೊಸ ಸಂಚಲನ ಮೂಡಿಸಿದೆ.
ಡಾ.ಕೆ.ರಾಮಚಂದ್ರ ರಾವ್ ಅವರು 1993 ರ ಬ್ಯಾಚ್‌ನ ಹಿರಿಯ ಐಪಿಎಸ್ ಅಧಿಕಾರಿಯಾಗಿದ್ದು, ರನ್ಯಾ ರಾವ್ ಚಿನ್ನ ಕಳ್ಳಸಾಗಾಣಿಕೆ ಪ್ರಕರಣ ಭಾರೀ ಸದ್ದು ಮಾಡಿದ ಬಳಿಕ ತನಿಖೆಯಲ್ಲಿ ಪಾರದರ್ಶಕತೆಗಾಗಿ ಸರ್ಕಾರ ಅವರನ್ನು ಕಡ್ಡಾಯ ರಜೆಯಲ್ಲಿ ಕಳುಹಿಸಿತ್ತು.2025 ರ ಆಗಸ್ಟ್ ನಲ್ಲಿ ರಾಜ್ಯ ಸರ್ಕಾರವು ಅವರ ಕಡ್ಡಾಯ ರಜೆಯನ್ನು ಹಿಂತೆಗೆದುಕೊಂಡು ಅವರನ್ನು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಡಿಜಿಪಿ ಆಗಿ ನೇಮಿಸಿತ್ತು.
ಇದೀಗ ರಾಮಚಂದ್ರ ರಾವ್ ಅವರು ಕಚೇರಿಯಲ್ಲೇ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವ ಕೆಲವು ವಿಡಿಯೋಗಳು ಬಹಿರಂಗವಾಗಿದೆ. ಲಭ್ಯ ಮಾಹಿತಿಯ ಪ್ರಕಾರ, ಈ ದೃಶ್ಯಾವಳಿಗಳನ್ನು ಡಿಜಿಪಿ ಕಚೇರಿಯೊಳಗೆ ರಹಸ್ಯವಾಗಿ ಸೆರೆ ಹಿಡಿಯಲಾಗಿದ್ದು,ಡಾ. ರಾವ್ ಅವರು ಅಧಿಕೃತ ಕೆಲಸದ ಅವಧಿಯಲ್ಲೇ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವುದನ್ನು ಸೆರೆಹಿಡಿಯಲಾಗಿದೆ ಎಂದು ಹೇಳಲಾಗಿದೆ.
ವಿಭಿನ್ನ ಸಂದರ್ಭಗಳಲ್ಲಿ ಕಚೇರಿಗೆ ಮಹಿಳೆಯರು ಭೇಟಿ ನೀಡಿದ್ದ ವೇಳೆ ಪ್ರತಿ ಬಾರಿಯೂ ಬೇರೆ ಬೇರೆ ಉಡುಗೆ ತೊಟ್ಟಿರುವ ವಿಡಿಯೋಗಳು ಬಹಿರಂಗವಾಗಿದೆ. ಪೊಲೀಸ್ ಸಮವಸ್ತ್ರ ತೊಟ್ಟಿರುವಾಗಲೂ ರಾಮಚಂದ್ರ ರಾವ್ ತಬ್ಬಿಕೊಂಡು ಮುತ್ತಿಕ್ಕುತ್ತಿರುವುದನ್ನು ಕಾಣಬಹುದಾಗಿದೆ.
ಇನ್ನು ಈ ಸಂಬಂಧ ಸಮವಸ್ತ್ರದಲ್ಲೇ ಮಹಿಳೆಯರೊಂದಿಗೆ ಸರಸವಾಡಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಐಜಿಪಿ ರಾಮಚಂದ್ರ ರಾವ್ ಅವರು ಮಾಧ್ಯಮಗಳ ಮುಂದೆ ಪ್ರತ್ಯಕ್ಷವಾಗಿ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ.
ಇದು ನನ್ನ ತೇಜೋವಧೆ ಮಾಡಲು ನಡೆಸಿರುವ ವ್ಯವಸ್ಥಿತ ಷಡ್ಯಂತ್ರ’ ಎಂದು ಅವರು ಕಿಡಿಕಾರಿದ್ದಾರೆ.ವೈರಲ್ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನಾನು ಕೂಡ ಇಂದು ಆ ವಿಡಿಯೋವನ್ನು ನೋಡಿದ್ದೇನೆ. ಅದು ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಿದ ಅಥವಾ ಎಡಿಟ್ ಮಾಡಿದ ವಿಡಿಯೋ ಆಗಿದೆ.

ನನ್ನ ವೃತ್ತಿಜೀವನಕ್ಕೆ ಕಪ್ಪುಚುಕ್ಕೆ ಹಚ್ಚಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಈ ರೀತಿಯ ಷಡ್ಯಂತ್ರ ರೂಪಿಸಿವೆ’ ಎಂದು ಸಮರ್ಥಿಸಿಕೊಂಡಿದ್ದಾರೆ.
ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳು ರಾಮಚಂದ್ರ ರಾವ್ ಅವರನ್ನು ಪ್ರಶ್ನಿಸಿದಾಗ, ಅವರು ಸರಿಯಾದ ಉತ್ತರ ನೀಡಲಾಗದೆ ತಬ್ಬಿಬ್ಬಾದ ಪ್ರಸಂಗವೂ ನಡೆದಿದೆ.ವಿಡಿಯೋದಲ್ಲಿರುವುದು ನೀವೇ ಅಲ್ಲವೇ? ಸಮವಸ್ತ್ರದಲ್ಲೇ ಇಂತಹ ವರ್ತನೆ ಸರಿಯೇ? ಎಂಬ ನೇರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಅವರು ಕಕ್ಕಾಬಿಕ್ಕಿಯಾಗಿ ಅಲ್ಲಿಂದ ನಿರ್ಗಮಿಸಿದರು.



