ಶಿವಮೊಗ್ಗ, ಕಾಂಗ್ರೆಸ್ ಆಡಳಿತದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಮನರೇಗಾ) ಯೋಜನೆ ಭ್ರಷ್ಟಾಚಾರದಿಂದ ಕೂಡಿತ್ತು. ಇದರಿಂದ, ಗಾಂಧೀಜಿ ಪ್ರತಿಪಾದಿಸಿದ ಆದರ್ಶಗಳನ್ನು ಬಲಿಕೊಡಲಾಗಿತ್ತು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.ಅದೇ ಕಾರಣಕ್ಕೆ ‘ನರೇಗಾ’ ಯೋಜನೆಗೆ ಪರ್ಯಾಯವಾಗಿ ರೂಪಿಸಿರುವ ‘ವಿಕಸಿತ ಭಾರತ– ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) (ವಿಬಿ–ಜಿ ರಾಮ್ ಜಿ) ಮಸೂದೆಯನ್ನುಅಂಗೀಕರಿಸಲಾಗಿದೆ ಎಂದು ಇಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಡವರಿಗೆ ಕೆಲಸ ಕೊಡುವ ಬದಲು ಜೆಸಿಬಿಯಲ್ಲಿ ಮಣ್ಣು ತೆಗೆದು ಗುತ್ತಿಗೆದಾರರು ಹಣ ಮಾಡಿಕೊಂಡರು. ಇಲ್ಲಿ ಬಡವರ ಕೈಗೆ ನೇರವಾಗಿ ಹಣ ಪಾವತಿ ಆಗುತ್ತಿರಲಿಲ್ಲ. ಮಧ್ಯವರ್ತಿಗಳು ಹಣ ಲೂಟಿ ಮಾಡುತ್ತಿದ್ದರು ಎಂದು ದೂರಿದರು.ಈ ಯೋಜನೆಯಡಿ ಹಣ ಕಬಳಿಸಲು ಸಾಧ್ಯವಾಗುವುದಿಲ್ಲ ಎಂಬ ಕಾರಣದಿಂದ ಈ ಕಾಯ್ದೆಯನ್ನು ಕಾಂಗ್ರೆಸ್ ವಿರೋಧಿಸುತ್ತಿದೆ. ಹಿಂದಿಗಿಂತ ಈಗ, ಪೂರೈಕೆ ಆಧಾರಿತ ವ್ಯವಸ್ಥೆ ಹೆಚ್ಚು ಯೋಜಿತವಾಗಿದೆ. ‘ವಿಕಸಿತ ಗ್ರಾಮ ಪಂಚಾಯತ್ ಯೋಜನೆ’ಗಳ ಮೂಲಕ ಕೆಲಸವನ್ನು ಬ್ಲಾಕ್, ಜಿಲ್ಲೆ, ರಾಜ್ಯ ಮಟ್ಟದಲ್ಲಿ ಯೋಜನೆ ಮಾಡಿ ವಿಕಸಿತ ಭಾರತ್ ರಾಷ್ಟ್ರೀಯ ಗ್ರಾಮೀಣ ಮೂಲಸೌಕರ್ಯ ಸ್ಟಾಕ್‌ಗೆ ಸೇರಿಸಲಾಗುತ್ತದೆ ಎಂದರು.
ನಿರ್ದಿಷ್ಟ, ಅನುಮೋದಿತ ಕಾರ್ಯಭಾರದ ಆಧಾರದ ಮೇಲೆ ಕೆಲಸ ಹಂಚಿಕೆಯೊಂದಿಗೆ ರಾಜ್ಯಗಳು ಕನಿಷ್ಠ 125 ದಿನಗಳ ಕೆಲಸ ಕೊಡಬೇಕು. ಸಾಮರ್ಥ್ಯ ಇದ್ದರೆ ಹೆಚ್ಚು ದಿನ ನೀಡಬಹುದು. 15 ದಿನಗಳಲ್ಲಿ ಕೆಲಸ ಸಿಗದಿದ್ದರೆ, ಭತ್ಯೆ ಕೊಡಲಾಗುತ್ತದೆ. ಈ ಕಾಯ್ದೆಯ ಮೂಲಕ ಕಾರ್ಮಿಕರಿಗೆ ಹೆಚ್ಚು ಶಕ್ತಿ ನೀಡುವುದು ಸರ್ಕಾರದ ಉದ್ದೇಶ ಎಂದರು.
ನೂತನ ಕಾಯ್ದೆ ಅಡಿ ಕೃಷಿ ಋತುವಿನಲ್ಲಿ ಕಾರ್ಮಿಕರಿಗೆ 60 ದಿನಗಳ ವಿರಾಮ ಕಡ್ಡಾಯವಾಗಿದೆ. ಇದರಿಂದ ರೈತರು ತಮ್ಮ ವೈಯಕ್ತಿಕ ಕೃಷಿ ಕಾರ್ಯಗಳನ್ನು ಮಾಡಿಕೊಳ್ಳಲು ಸಹಾಯವಾಗಲಿದೆ. ಈ 60 ದಿನದ ವಿರಾಮ ಅವಧಿ ಯಾವಾಗ ಇರಬೇಕು ಎನ್ನುವುದನ್ನು ಆಯಾ ಪ್ರದೇಶದ ಬಿತ್ತನೆ ಅಥವಾ ಕೊಯ್ದು ಅವಧಿ ನೋಡಿಕೊಂಡು ಆಯಾ ರಾಜ್ಯ ಸರ್ಕಾರಗಳು ನಿರ್ಧರಿಸಲಿವೆ. ಪೂರೈಕೆ ಆಧಾರಿತ ಕೆಲಸ ಹಂಚಿಕೆ – ಕಾರ್ಮಿಕರಿಗೆ ಹೆಚ್ಚು ಶಕ್ತಿ ನೀಡಲಾಗುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಈ ಸಂದರ್ಭದಲ್ಲಿ ಸಂಸದರಾದ ಬಿ ವೈ ರಾಘವೇಂದ್ರ, ಜಿಲ್ಲಾಧ್ಯಕ್ಷರಾದ ಜಗದೀಶ್, ಶಿವಮೊಗ್ಗ ನಗರ ಶಾಸಕರಾದ ಎಸ್ ಎನ್ ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಧನಂಜಯ ಸರ್ಜಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಿವರಾಜ್, ಹರಿಕೃಷ್ಣ, ಮಾಲತೇಶ್, ಜಿಲ್ಲಾ ಸಮಿತಿಯ ರಾಜೇಶ್ ಕಾಮತ್, ಮಲ್ಲಿಕಾರ್ಜುನ್ ಹಕ್ರೆ, ಮಾಧ್ಯಮ ಪ್ರಮುಖ್ ಎಸ್ ಚಂದ್ರಶೇಖರ್, ಸಹ ಪ್ರಮುಖ್ ಮಂಜುನಾಥ್ ಎನ್ ಉಪಸ್ಥಿತರಿದ್ದರು.



