ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ , ಶರಾವತಿ ಹಿನ್ನೀರಿನಲ್ಲಿ ಈಜಲು ತೆರಳಿದ ಪಶುವೈದ್ಯಾಧಿಕಾರಿಯೋರ್ವರು, ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ, ಸಾಗರ ತಾಲೂಕಿನ ಹಕ್ರೆಯ ಬಾಳೇಗೆರೆ ಗ್ರಾಮದ ಸಮೀಪ ಜನವರಿ 11 ರಂದು ನಡೆದಿದೆ.
ಡಾ!! ಸುನೀಲ್ (38) ಮೃತಪಟ್ಟ ಪಶುವೈದ್ಯಾಧಿಕಾರಿ. ಇವರು ಮಾಸೂರಿನಲ್ಲಿ ಹಿರಿಯ ಪಶು ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದರು.ಭಾನುವಾರ ಕರ್ತವ್ಯಕ್ಕೆ ರಜೆಯಿದ್ದ ಕಾರಣದಿಂದ, ಮಧ್ಯಾಹ್ನ ಕುಟುಂಬ ಸದಸ್ಯರೊಂದಿಗೆ ಶರಾವತಿ ಹಿನ್ನೀರು ಬಳಿ ಡಾ. ಸುನೀಲ್ ಪ್ರವಾಸಕ್ಕೆ ಬಂದಿದ್ದರು.
ಈ ವೇಳೆ ಶರಾವತಿ ಹಿನ್ನೀರಿನಲ್ಲಿ ಈಜಾಡಲು ತೆರಳಿದ್ದರು.ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳವು ಹಲವು ಗಂಟೆಗಳ ಕಾಲ ಶೋಧ ಕಾರ್ಯಾಚರಣೆ ನಡೆಸಿ, ನೀರಿನಿಂದ ಮೃತದೇಹ ಹೊರತೆಗೆದಿದೆ.ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಅಧಿಕಾರಿ ವಿನಾಯಕ ನಾಯಕ, ಲೀಡಿಂಗ್ ಫೈರ್‘ಮ್ಯಾನ್ ಗಳಾದ ರಾಜೇಂದ್ರ ಡಿ ಬಿ, ಗಣೇಶ್ ಆರ್ ಶೇಟ್, ಸಿಬ್ಬಂದಿಗಳಾದ ವಿಶ್ವನಾಥ ರೆಡ್ಡಿ, ಶಿವಕುಮಾರ್ ಡಿ, ಸತೀಶ್ ಕುಮಾರ್, ಜಯಂತ್ ಭಾಗಿಯಾಗಿದ್ದರು.
ಈ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



