ಕೇರಳ ಸರ್ಕಾರದ ‘ಮಲಯಾಳಂ ಭಾಷಾ ಮಸೂದೆ-2025’ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಸಂಬಂಧ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದು ತೀವ್ರ ಕಳವಳ ವ್ಯಕ್ತಪಡಿಸಿದ್ದರು.ಸಿಎಂ ಸಿದ್ದರಾಮಯ್ಯ ಅವರ ಪತ್ರಕ್ಕೆ ಶನಿವಾರ ಸ್ಪಷ್ಟನೆ ನೀಡಿರುವ ಕೇರಳ ಸಿಎಂ, “ನಮ್ಮ ಸರ್ಕಾರ ಯಾವುದೇ ಭಾಷೆಯನ್ನು ಬಲವಂತವಾಗಿ ಹೇರುವ ಉದ್ದೇಶ ಹೊಂದಿಲ್ಲ.
ಭಾಷಾ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗೆ ಕಾಯ್ದೆಯಲ್ಲಿ ಪ್ರಮುಖ ಅಂಶಗಳನ್ನು ಸೇರಿಸಲಾಗಿದೆ” ಎಂದು ಹೇಳಿದ್ದಾರೆ.
ಈ ಕುರಿತು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಮತ್ತು ಮಾಧ್ಯಮ ಹೇಳಿಕೆ ಮೂಲಕ ಪ್ರತಿಕ್ರಿಯಿಸಿರುವ ಅವರು, ಮಸೂದೆಯ ಕುರಿತು ಎದ್ದಿರುವ ಊಹಾಪೋಹಗಳು ಸತ್ಯಕ್ಕೆ ದೂರವಾದವು ಎಂದು ಪ್ರತಿಪಾದಿಸಿದ್ದಾರೆ.
ಕೇರಳದ ಪ್ರಗತಿ ಯಾವಾಗಲೂ ಸಮಾನತೆ ಮತ್ತು ಸಹೋದರತ್ವದಲ್ಲಿ ನೆಲೆಗೊಂಡಿರುವ ಸಮಗ್ರ ಅಭಿವೃದ್ಧಿಯಲ್ಲಿ ಬೇರೂರಿದೆ.
ಜಾತ್ಯತೀತತೆ ಮತ್ತು ಬಹುತ್ವದ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವಲ್ಲಿ ನಮ್ಮ ಸರ್ಕಾರ ದೃಢವಾಗಿದೆ ಎಂದು ಕೇರಳ ಸಿಎಂ ತಿಳಿಸಿದ್ದಾರೆ.



