ನವದೆಹಲಿ, ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿರುವ ಭಾರತ ಇದೀಗ, ಅಕ್ಕಿ ಉತ್ಪಾದನೆಯಲ್ಲೂ ಡ್ರ್ಯಾಗನ್ ರಾಷ್ಟ್ರವನ್ನು ಹಿಂದಕ್ಕೆ ತಳ್ಳುವ ಮೂಲಕ ವಿಶ್ವದಲ್ಲಿಯೇ ಅತಿ ಹೆಚ್ಚು ಅಕ್ಕಿ ಉತ್ಪಾದನೆ ಮಾಡುವ ರಾಷ್ಟ್ರವಾಗಿ ಹೊರಹೊಮ್ಮಿದೆ.
ಈ ಬಗ್ಗೆ ಅಧಿಕೃತ ಘೋಷಣೆ ಹೊರಡಿಸಿರುವ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು, ಭಾರತವು 150.18 ಮಿಲಿಯನ್ ಟನ್ ಉತ್ಪಾದನೆಯೊಂದಿಗೆ ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿದೊಡ್ಡ ಅಕ್ಕಿ ಉತ್ಪಾದಕ ರಾಷ್ಟ್ರವಾಗಿದೆ.
ಚೀನಾದ ಅಕ್ಕಿ ಉತ್ಪಾದನೆಯು 145.28 ಮಿಲಿಯನ್ ಟನ್‌ಗಳಷ್ಟಿದೆ. ಭಾರತವು ಹೆಚ್ಚಿನ ಇಳುವರಿ ನೀಡುವ ಬೀಜಗಳ ಅಭಿವೃದ್ಧಿಯಲ್ಲಿ ಭರ್ಜರಿ ಯಶಸ್ಸು ಸಾಧಿಸಿದೆ. ವಿಶ್ವದ ಮಾರುಕಟ್ಟೆಗಳಿಗೆ ಅಕ್ಕಿಯ ಪ್ರಮುಖ ರಫ್ತುದಾರನಾಗಿ ಭಾರತ ಮೊದಲ ಸ್ಥಾನದಲ್ಲಿದೆ ಎಂದು ಹೇಳಿದರು.
184 ಹೊಸ ತಳಿ ಬಿಡುಗಡೆ: ರಾಷ್ಟ್ರ ರಾಜಧಾನಿಯಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR) ಅಭಿವೃದ್ಧಿಪಡಿಸಿದ 25 ವಿವಿಧ ಬೆಳೆಗಳ 184 ಸುಧಾರಿತ ತಳಿಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಕೇಂದ್ರ ಕೃಷಿ ಸಚಿವರು, ಹೊಸ ತಳಿಗಳ ಪೈಕಿ 122 ಧಾನ್ಯಗಳು, 6 ದ್ವಿದಳ ಧಾನ್ಯಗಳು, 13 ಎಣ್ಣೆಕಾಳುಗಳು, 11 ಮೇವಿನ ಬೆಳೆಗಳು, 6 ಕಬ್ಬು, 24 ಹತ್ತಿ ಮತ್ತು ಸೆಣಬು, ತಂಬಾಕಿನ ತಲಾ ಒಂದು ತಳಿ ಸೇರಿವೆ ಎಂದರು.
ಈ ಹೊಸ ತಳಿಗಳು ರೈತರನ್ನು ತ್ವರಿತವಾಗಿ ತಲುಪುವಂತೆ ವ್ಯವಸ್ಥೆ ಮಾಡಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಹೊಸ ಮುಂದುವರಿದ ತಳಿಗಳ ಮಹತ್ವವನ್ನು ವಿವರಿಸಿದ ಕೇಂದ್ರ ಸಚಿವರು, ಹೆಚ್ಚಿನ ಇಳುವರಿ ಮತ್ತು ಉತ್ತಮ ಗುಣಮಟ್ಟದ ಉತ್ಪನ್ನದಿಂದ ರೈತರು ಪ್ರಯೋಜನ ಪಡೆಯುತ್ತಾರೆ. ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು ದ್ವಿದಳ ಧಾನ್ಯಗಳು ಮತ್ತು ಎಣ್ಣೆಬೀಜಗಳ ಉತ್ಪಾದನೆಯನ್ನು ಇನ್ನಷ್ಟು ಹೆಚ್ಚಿಸುವತ್ತ ಗಮನಹರಿಸಲು ಕೃಷಿ ವಿಜ್ಞಾನಿಗಳಿಗೆ ಸಲಹೆ ನೀಡಿದರು.



