ಬಳ್ಳಾರಿ | ವಾಲ್ಮೀಕಿ ಪ್ರತಿಮೆ ಬ್ಯಾನರ್ ಗಲಾಟೆ ; ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು

ಬಳ್ಳಾರಿ

ಬಳ್ಳಾರಿ, ವಾಲ್ಮೀಕಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಸಂಬಂಧಿಸಿದ ಬ್ಯಾನರ್ ಕಟ್ಟುವ ವಿಚಾರವೇ ಬಳ್ಳಾರಿಯಲ್ಲಿ ಭೀಕರ ಹಿಂಸಾಚಾರಕ್ಕೆ ಕಾರಣವಾಗಿ, ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಮೃತಪಟ್ಟ ಘಟನೆ ಶನಿವಾರ ನಗರವನ್ನು ಬೆಚ್ಚಿಬೀಳಿಸಿದೆ.

ಶನಿವಾರ ಪ್ರತಿಷ್ಠಾಪನೆಗೊಳ್ಳಲಿರುವ ವಾಲ್ಮೀಕಿ ಪ್ರತಿಮೆ ಹಿನ್ನೆಲೆಯಲ್ಲಿ ನಗರದಾದ್ಯಂತ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಭಾವಚಿತ್ರವಿರುವ ಬ್ಯಾನರ್‌ಗಳನ್ನು ಕಟ್ಟಲಾಗಿತ್ತು. ಅದೇ ರೀತಿ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ನಿವಾಸದ ಎದುರಿನ ಜಾಗದಲ್ಲೂ ಬ್ಯಾನರ್ ಕಟ್ಟಲಾಗಿದ್ದು, ಇದನ್ನು ಜನಾರ್ದನ ರೆಡ್ಡಿ ತೆರವುಗೊಳಿಸಿದುದೇ ಸಂಘರ್ಷಕ್ಕೆ ನಾಂದಿ ಹಾಡಿತು.

ಬ್ಯಾನರ್ ತೆರವುಗೊಳಿಸಿದ ಸುದ್ದಿ ತಿಳಿಯುತ್ತಿದ್ದಂತೆ, ಭರತ್ ರೆಡ್ಡಿ ಬೆಂಬಲಿಗ ಎನ್ನಲಾದ ಸತೀಶ್ ರೆಡ್ಡಿ ಜನಾರ್ದನ ರೆಡ್ಡಿ ಮನೆ ಎದುರು ರಸ್ತೆ ಮಧ್ಯೆ ಕುರ್ಚಿ ಹಾಕಿ ಕುಳಿತು ದರ್ಪದಿಂದ ಪುನಃ ಬ್ಯಾನರ್ ಕಟ್ಟಿಸಿದ್ದಾರೆ ಎನ್ನಲಾಗಿದೆ.

ಗಲಾಟೆ ಹೆಚ್ಚುತ್ತಿರುವ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಶಾಸಕ ಬಿ. ಶ್ರೀರಾಮುಲು ಪರಿಸ್ಥಿತಿ ಶಾಂತಗೊಳಿಸಲು ಪ್ರಯತ್ನಿಸಿದರೂ, ಅವರ ಮಾತು ಯಾರೂ ಕೇಳದೆ ಕಲ್ಲು ತೂರಾಟಕ್ಕೆ ಇಳಿದಿದ್ದಾರೆ.

ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿಗರ ನಡುವೆ ಮೊದಲು ಮಾತಿನ ಚಕಮಕಿ, ನಂತರ ಕಲ್ಲು ತೂರಾಟ, ದಬ್ಬಾಳಿಕೆ ನಡೆದಿದೆ. ಈ ನಡುವೆ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಅವರ ಖಾಸಗಿ ಅಂಗರಕ್ಷಕರು ಎರಡು ಸುತ್ತು ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ಪೊಲೀಸರು ಆರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಜನರನ್ನು ಚದುರಿಸಿದ್ದಾರೆ.

ಈ ಘಟನೆಯಲ್ಲಿ ಗುಂಡೇಟಿಗೆ ಬಳ್ಳಾರಿ ಹುಸೇನ ನಗರದ ರಾಜಶೇಖರ (28) ಎಂಬ ಯುವಕ ಮೃತಪಟ್ಟಿದ್ದಾನೆ. ಆತ ತಮ್ಮ ಬೆಂಬಲಿಗನೆಂದು ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ. ಆದರೆ ಮೃತನಿಗೆ ತಗುಲಿದ ಗುಂಡು ಪೊಲೀಸ್‌ ಗುಂಡೇಟೋ ಅಥವಾ ಖಾಸಗಿ ಅಂಗರಕ್ಷಕರ ಗುಂಡೇಟೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.ಘರ್ಷಣೆಯ ಬಳಿಕ ಜನಾರ್ದನ ರೆಡ್ಡಿ ತಮ್ಮ ಮೇಲೆ ಹತ್ಯೆ ಯತ್ನ ನಡೆದಿದೆ ಎಂದು ಆರೋಪಿಸಿದ್ದು, ಖಾಲಿ ಗುಂಡಿನ ಕೊಳವೆ ತೋರಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದರಿಂದ ಮತ್ತಷ್ಟು ಉದ್ರಿಕ್ತಗೊಂಡ ಸಾವಿರಕ್ಕೂ ಹೆಚ್ಚು ಭರತ್ ರೆಡ್ಡಿ ಬೆಂಬಲಿಗರು ಎಸ್ಪಿ ಸರ್ಕಲ್‌ನಿಂದ ಜನಾರ್ದನ ರೆಡ್ಡಿ ನಿವಾಸದವರೆಗೆ ದೊಣ್ಣೆ, ಕಲ್ಲು, ಕೋಲು ಹಿಡಿದು ದಾಳಿ ನಡೆಸಿದ್ದು, ಮನೆ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ.ಪರಿಸ್ಥಿತಿ ಸಂಪೂರ್ಣವಾಗಿ ಕೈಮೀರಿ ಹೋಗಿದ್ದರಿಂದ ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ.

ಐಜಿಪಿ ವರ್ತಿಕಾ ಕಟಿಯಾರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ಪ್ರಯತ್ನಿಸುತ್ತಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿ ಬಳ್ಳಾರಿ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಜನಾರ್ದನ ರೆಡ್ಡಿ, ಬಿ. ಶ್ರೀರಾಮುಲು, ಸೋಮಶೇಖರ್ ರೆಡ್ಡಿ, ಆಲಿಖಾನ್, ದಮ್ಮೂರು ಶೇಖರ್ ಸೇರಿದಂತೆ ಒಟ್ಟು 11 ಮಂದಿಯ ವಿರುದ್ಧ ಕೇಸು ದಾಖಲಾಗಿದೆ. ಮತ್ತೊಂದೆಡೆ, ಜನಾರ್ದನ ರೆಡ್ಡಿ ಬಂಧನಕ್ಕೆ ಆಗ್ರಹಿಸಿ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಬೆಂಬಲಿಗರು ಸ್ಥಳದಲ್ಲೇ ಧರಣಿ ನಡೆಸುತ್ತಿದ್ದಾರೆ.

ಬಳ್ಳಾರಿಯಲ್ಲಿ ರಾಜಕೀಯ ದ್ವೇಷ ಈಗ ಬ್ಯಾನರ್‌ನಿಂದ ಗುಂಡಿನವರೆಗೆ ತಲುಪಿದ್ದು, ನಗರವಿಡೀ ಆತಂಕದ ವಾತಾವರಣ ನಿರ್ಮಾಣವಾಗಿದೆ.

Author