ರಾಜಸ್ಥಾನದ ಜೈಪುರದಲ್ಲಿ ಹೊಸ ವರ್ಷದ ಮುನ್ನಾದಿನವಾದ ನಿನ್ನೆ(ಬುಧವಾರ) ರಾಜಸ್ಥಾನದ ರಾಜಧಾನಿ ಜೈಪುರ ವಿಶೇಷ ಸಂದೇಶದೊಂದಿಗೆ ಹೊಸ ವರ್ಷವನ್ನು ಬರಮಾಡಿಕೊಂಡಿತು.
ನಗರದಾದ್ಯಂತ 200ಕ್ಕೂ ಹೆಚ್ಚು ಸ್ಥಳಗಳಲ್ಲಿ ಸುಮಾರು ಒಂದು ಲಕ್ಷ ಲೀಟರ್ ಹಾಲು ವಿತರಿಸಲಾಯಿತು. ಹೊಸ ವರ್ಷವನ್ನು ಮದ್ಯದ ಬದಲು ಹಾಲಿನೊಂದಿಗೆ ಆಚರಿಸೋಣ ಎಂಬುದೇ ಇಲ್ಲಿರುವ ಸಂದೇಶ.
ರಾಜಸ್ಥಾನ ಯುವ ವಿದ್ಯಾರ್ಥಿಗಳ ಸಂಘಟನೆ ಮತ್ತು ಭಾರತೀಯ ಅಸ್ತಮಾ ಆರೈಕೆ ಸಂಘವು ರಾಜಸ್ಥಾನ ವಿಶ್ವವಿದ್ಯಾಲಯದ ದ್ವಾರದಲ್ಲಿ ಹಾಲು ವಿತರಿಸಿತು. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಸಾವಿರಾರು ಜನರು ಹಾಲು ಸ್ವೀಕರಿಸಿ ಸೇವಿಸಿದರು.
ಈ ಕುರಿತು ಹೆಚ್ಚುವರಿ ಪೊಲೀಸ್ ಆಯುಕ್ತ ರಾಜೀವ್ ಪಚಾರ್ ಮೆಚ್ಚುಗೆ ವ್ಯಕ್ತಪಡಿಸಿ,”ರಾಜಸ್ಥಾನ ವಿವಿಯ ದ್ವಾರದಲ್ಲಿ ಹಾಲು ವಿತರಣಾ ಕಾರ್ಯಕ್ರಮ ಮಾಡಿರುವುದು ಅತ್ಯಂತ ಶ್ಲಾಘನೀಯ. ಇದು ಹೊಸ ವರ್ಷವನ್ನು ಮದ್ಯದ ಬದಲು ಹಾಲಿನೊಂದಿಗೆ ಪ್ರಾರಂಭಿಸಬೇಕೆಂಬ ಸಂದೇಶ ನೀಡುತ್ತದೆ. ಹೊಸ ವರ್ಷ ಎಲ್ಲರಿಗೂ ಶುಭವಾಗಬೇಕು. ಅದಕ್ಕಾಗಿ ಮೊದಲ ದಿನದಿಂದಲೇ ಒಳ್ಳೆಯ ಆರಂಭ ಅತ್ಯಗತ್ಯ. ಹೊಸ ವರ್ಷವನ್ನು ಶಾಂತಿಯುತವಾಗಿ ಆಚರಿಸೋಣ” ಎಂದು ಅವರು ಮನವಿ ಮಾಡಿದರು.
ವಿಶ್ವವಿದ್ಯಾಲಯದ ದ್ವಾರದಲ್ಲಿ ಹಾಲು ವಿತರಣಾ ಕಾರ್ಯಕ್ರಮವು 21 ವರ್ಷಗಳ ಹಿಂದೆ ಹೊಸ ವರ್ಷದ ಮುನ್ನಾದಿನದಂದು 500 ಲೀಟರ್ ಹಾಲು ವಿತರಿಸುವ ಮೂಲಕ ಶುರುವಾಗಿತ್ತು. ಇದು ಮುಂದಿನ ವರ್ಷಗಳಲ್ಲಿ ಬೆಳೆದು ಈಗ 8,000 ಲೀಟರ್ ಹಾಲು ವಿತರಣೆಯವರೆಗೆ ತಲುಪಿದೆ. ಇದೀಗ ಜೈಪುರ ನಗರದಾದ್ಯಂತ 200ಕ್ಕೂ ಹೆಚ್ಚು ಸ್ಥಳಗಳಲ್ಲಿ ಹಾಲು ವಿತರಣಾ ಕಾರ್ಯಕ್ರಮಗಳು ನಡೆಯುತ್ತಿವೆ.
ಅಸ್ತಮಾ ತಜ್ಞ ಡಾ.ವೀರೇಂದ್ರ ಸಿಂಗ್ ಅವರು ಪ್ರತಿಕ್ರಿಯಿಸಿ, “ಹೊಸ ವರ್ಷವನ್ನು ಮದ್ಯದಿಂದಲ್ಲ, ಹಾಲಿನಿಂದ ಪ್ರಾರಂಭಿಸುವುದು ಒಂದು ಒಳ್ಳೆಯ ಚಿಂತನೆ. ಒಬ್ಬರ ದೇಹವನ್ನು ರಕ್ಷಿಸುವುದು ಪ್ರತಿಯೊಬ್ಬ ವ್ಯಕ್ತಿಯ ಜನ್ಮಸಿದ್ಧ ಹಕ್ಕು. ಮದ್ಯ ದೇಹವನ್ನು ನಾಶಮಾಡುವ ವಸ್ತು. ಜೀವನದಲ್ಲಿ ಎಂದಿಗೂ ಮದ್ಯಪಾನ ಮಾಡಬಾರದು. ಹೊಸ ವರ್ಷದ ಮುನ್ನಾದಿನ ರಾಜಸ್ಥಾನ ವಿಶ್ವವಿದ್ಯಾಲಯದ ದ್ವಾರಗಳಲ್ಲಿ ಜನರಿಗೆ ಕುಡಿಯಲು ಹಾಲು ನೀಡಲಾಯಿತು. ಹೊಸ ವರ್ಷವನ್ನು ಆರೋಗ್ಯಕರ ರೀತಿಯಲ್ಲಿ ಪ್ರಾರಂಭಿಸುವ ಸಂದೇಶ ಈ ಮೂಲಕ ರವಾನೆಯಾಗಿದೆ” ಎಂದು ಸಂತಸ ವ್ಯಕ್ತಪಡಿಸಿದರು.
“ದೇಶ ಮುನ್ನಡೆಸುವಲ್ಲಿ ಯುವಕರು ನಿರ್ಣಾಯಕ ಪಾತ್ರ ವಹಿಸುತ್ತಾರೆ. ಭವಿಷ್ಯದ ಪೀಳಿಗೆಗೆ ವ್ಯಸನದ ಅಪಾಯಗಳ ಬಗ್ಗೆ ಅರಿವಿರಬೇಕು. ಹಾಲಿನೊಂದಿಗೆ ಹೊಸ ವರ್ಷವನ್ನು ಪ್ರಾರಂಭಿಸುವುದು ಅತ್ಯುತ್ತಮ ಕಾರ್ಯ. ಹಾಲು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಮದ್ಯಪಾನ ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಕೆಟ್ಟ ಅಭ್ಯಾಸಗಳನ್ನು ತ್ಯಜಿಸಿ ಮತ್ತು ಒಳ್ಳೆಯದನ್ನು ಅಳವಡಿಸಿಕೊಳ್ಳೋಣ” ಎಂದು ಇದೇ ವೇಳೆ ಅವರು ಕರೆ ಕೊಟ್ಟರು.



