ಬೆಳಗಾವಿ, ರಾಜ್ಯದ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಐದು ಸಾವಿರಕ್ಕಿಂತ ಹೆಚ್ಚು ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ಹಲವಾರು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಾ ಬಂದಿದ್ದು. ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ದಾಖಲಾತಿ ಸೇರಿದಂತೆ ಕಾಲೇಜಿನ ಎಲ್ಲಾ ಕೆಲಸವನ್ನು ಮಾಡುತ್ತಾ ಬರುತ್ತಿದ್ದೇವೆ ಎಂದು ಸರ್ಕಾರಕ್ಕೆ ಮನವಿ ಪತ್ರದಲ್ಲಿ ಉಲ್ಲೇಖಸಿದ್ದಾರೆ.
ಹಲವಾರು ಅತಿಥಿ ಉಪನ್ಯಾಸಕರು ಹತ್ತು ವರ್ಷಕ್ಕಿಂತಲೂ ಹೆಚ್ಚು ಸೇವೆ ಸಲ್ಲಿಸಿದ್ದೇವೆ. ಇಷ್ಟೆಲ್ಲಾ ಸೇವೆಗಳನ್ನು ಸಲ್ಲಿಸುತ್ತಿರುವ ನಮಗೆ , ಈಗಲೂ ಮಾಸಿಕ ಗೌರವಧನ ಕೇವಲ 14 ಸಾವಿರ ರೂಪಾಯಿಗಳು ಮಾತ್ರ. ಇದು ಕೂಡ ವರ್ಷದ ಎಂಟು ತಿಂಗಳಿಗೆ ಮಾತ್ರ. ಈ ಗೌರವ ಧನದಿಂದ ಜೀವನ ನಡೆಸುವುದೇ ಕಷ್ಟಕರವಾಗಿದೆ ಎಂದು ಆರೋಪಿಸಿದ್ದಾರೆ.

ಇನ್ನು ರಾಜ್ಯದ ಹಲವಾರು ಕಾಲೇಜುಗಳಲ್ಲಿ, ವಾರಕ್ಕೆ ಕೇವಲ 10 ಗಂಟೆಗಳು ಮಾತ್ರ ಕಾರ್ಯಭಾರ ನೀಡಬೇಕೆಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಸುತ್ತೋಲೆ ಇದ್ದರೂ, ವಾರಕ್ಕೆ 20 ಗಂಟೆಗಳಿಗಿಂತ ಹೆಚ್ಚು ಕಾರ್ಯಭಾರ ನೀಡುತ್ತಿದ್ದಾರೆ .
ಒಂದೆಡೆ ಕಡಿಮೆ ಗೌರವಧನ ಇನ್ನೊಂದೆಡೆ ನಮಗೆ ಹೆಚ್ಚು ಕಾರ್ಯಭಾರವನ್ನು ನೀಡಿ ದುಸ್ತರ ಪರಿಸ್ಥಿತಿಗೆ ನಮ್ಮನ್ನು ದುಡಿದ್ದಾರೆ. ಇನ್ನೊಂದೆಡೆ, ಸೇವಾ ಭದ್ರತೆ ಎಂಬುದು ನಮ್ಮೆಲ್ಲರಿಗೂ ಮರೀಚಿಕೆಯಾಗಿದೆ. ಪ್ರತಿ ವರ್ಷವೂ ಮುಂದಿನ ವರ್ಷ ನಮಗೆ ಕೆಲಸ ಇರುತ್ತದೆ ಇಲ್ಲವೋ ಎಂಬ ಆತಂಕ ಹಾಗೂ ಭಯ ನಮ್ಮೆಲ್ಲರನ್ನು ಕಾಡುತ್ತದೆ ಎಂಬ ಭಯ ಹೊರ ಹಾಕಿದ್ದಾರೆ.
ಪದವಿಪೂರ್ವ ಶಿಕ್ಷಣ ಇಲಾಖೆಯ ನೇಮಕಾತಿಯ ಆದೇಶದಲ್ಲಿ ಕೇವಲ ಉತ್ತಮ ಮೆರಿಟ್ ಇದ್ದವರಿಗೆ ಮಾತ್ರ ಆದ್ಯತೆ ನೀಡುವುದರಿಂದ, ಪ್ರತಿ ವರ್ಷವೂ ನಮ್ಮಲ್ಲಿ ಕೆಲವರು ಕೆಲಸ ಕಳೆದುಕೊಂಡು, ಸೇವೆಗೆ ಯಾವುದೇ ರೀತಿ ಬೆಲೆ ಸಿಗುತ್ತಿಲ್ಲ. ಸೇವಾ ಹಿರಿತನ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಆದರೆ ಸೇವಾ ಅವಧಿಯನ್ನೇ ಪರಿಗಣಿಸದಿರುವುದು, ಹಲವಾರು ವರ್ಷ ಸೇವೆ ಸಲ್ಲಿಸಿರುವ ಅತಿಥಿ ಉಪನ್ಯಾಸಕರಿಗೆ ಮಾಡುವ ಅನ್ಯಾಯವಾಗಿದೆ.
ಒಟ್ಟಿನಲ್ಲಿ ಯಾವುದೇ ಸೇವಾ ಭದ್ರತೆ ಇಲ್ಲದೆ , ಜೀವನ ನಡೆಸುವಷ್ಟು ಗೌರವಧನವಿಲ್ಲದೆ , ಶೋಷಣೆಗೆ ಒಳಗಾಗುತ್ತಾ ಪದವಿ ಪೂರ್ವ ಕಾಲೇಜುಗಳಲ್ಲಿ ದುಡಿಯುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಆದರಿಂದ ಕೂಡಲೇ ಸರ್ಕಾರ ಎಲ್ಲಾ ಸಮಸ್ಯೆಗಳನ್ನು ಹಾಗೂ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ನಾವು ಹೋರಾಟ ಮಾಡುತ್ತಿದ್ದೇವೆ.

ಈ ಕೆಳಕಂಡ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ:
ಗುಣಮಟ್ಟದ ಶಿಕ್ಷಣವನ್ನು ಖಾತ್ರಿಪಡಿಸಲು ಪ್ರತಿ ವರ್ಷದ ‘ಅತಿಥಿ’ ಉಪನ್ಯಾಸಕರ ನೇಮಕಾತಿಯಲ್ಲಿ ಸೇವಾ ಹಿರಿತನವನ್ನು ಪರಿಗಣಿಸಿ, ಕಾರ್ಯನಿರತ ‘ಅತಿಥಿ’ ಉಪನ್ಯಾಸಕರನ್ನು ಸೇವೆಯಲ್ಲಿ ಮುಂದುವರಿಸಿ. ಸೇವಾ ಪ್ರಮಾಣ ಪತ್ರ ಮತ್ತು ಕೃಪಾಂಕ ನೀಡಿ ಸೇವಾ ಭದ್ರತೆ ಒದಗಿಸಬೇಕು. ಸರ್ಕಾರಿ ಪದವಿ ಪೂರ್ವ ‘ಅತಿಥಿ’ ಉಪನ್ಯಾಸಕರ ಮಾಸಿಕ ‘ಗೌರವ ಧನ’ ವನ್ನು ರೂ14,000 ಗಳಿಂದ ಕನಿಷ್ಠ ಗಳಿಗೆ ರೂ.30,000ಕ್ಕೆ ಹೆಚ್ಚಿಸಿ ಮಾರ್ಚ್ ಅಂತ್ಯದವರೆಗೂ ಸೇವೆಯಲ್ಲಿ ಮುಂದುವರಿಸುವುದು.
ಪದವಿಪೂರ್ವ ಶಿಕ್ಷಣ ಇಲಾಖೆಯ ಆದೇಶದಂತೆ ‘ಅತಿಥಿ’ ಉಪನ್ಯಾಸಕರಿಗೆ ವಾರಕ್ಕೆ 10/12 ಗಂಟೆಗಳ ಕಾರ್ಯಭಾರ ಮಾತ್ರ ನೀಡಿರಿ.ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (KKRDB) ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಕಳೆದ ಆರು ತಿಂಗಳ ಗೌರವಧನವನ್ನು ಕೂಡಲೇ ಬಿಡುಗಡೆ ಮಾಡಬೇಕು.
ಪದವಿ ಕಾಲೇಜು ಮಹಿಳಾ ಅತಿಥಿ ಉಪನ್ಯಾಸಕರಿಗೆ ಪ್ರಸೂತಿ ಸಂದರ್ಭದಲ್ಲಿ ನೀಡುವ ಸೌಲಭ್ಯಗಳನ್ನು, ಪದವಿ ಪೂರ್ವ ಮಹಿಳಾ ಅತಿಥಿ ಉಪನ್ಯಾಸಕರಿಗೂ ನೀಡಬೇಕು ಹಾಗೂ ಇನ್ನಿತರೇ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.

ಈ ಪ್ರತಿಭಟನಾ ಧರಣಿಯಲ್ಲಿ ಸಂಘಟನೆ ಸಲಹೆಗಾರರಾದ ವಿ. ಎನ್ .ರಾಜಶೇಖರ್ , ರಾಜ್ಯ ಅಧ್ಯಕ್ಷರಾದ ಪದ್ಮಪ್ರಭ ಇಂದ್ರ , ಕಾರ್ಯದರ್ಶಿಯಾದ ರಾಜೇಶ್ ಭಟ್ , ಉಪಾಧ್ಯಕ್ಷರಾದ ಮಹೇಶ್ ಎಸ್ ಜಿ , ಜಂಟಿ ಕಾರ್ಯದರ್ಶಿಗಳಾದ ಶ್ರೀಮತಿ ಎಸ್ಜಿ ನಾಗರತ್ನ ಸೇರಿದಂತೆ ಅತಿಥಿ ಉಪನ್ಯಾಸಕರಾದ ರಂಗಣ್ಣ, ಶರಣಪ್ಪ , ಶಂಕರ್ ಪೂಜಾರ್ ಸೇರಿದಂತೆ ನೂರಾರು ಮಂದಿ ಅತಿಥಿ ಉಪನ್ಯಾಸಕರು ಉಪಸ್ಥಿತರಿದ್ದರು.



